ಅಬುಧಾಬಿ: ಹೊರ್ಮುಜ್ ಜಲಸಂಧಿಯಲ್ಲಿ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೈಟ್ಸ್‌ನ (ಯುಎಇ) 'ಮೊಂಬಾಸಾ' ಮತ್ತು 'ಅಲ್ ಬಹಿಯಾ' ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
'ದಾಳಿಯಲ್ಲಿ ಮೊಂಬಾಸಾ ಟ್ಯಾಂಕರ್‌ನಲ್ಲಿದ್ದ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನಿಯನ್ನರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.
ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ' ಎಂದು ಯುಎಇ ರಕ್ಷಣಾ ಸಚಿವಾಲಯ ಪ್ರಕಟಣೆ ತಿಳಿಸಿದೆ.
'ಹೊರ್ಮುಜ್ ಜಲಸಂಧಿಯ ದಕ್ಷಿಣ ಹಡಗು ಮಾರ್ಗದಲ್ಲಿ ಚಲಿಸುತ್ತಿದ್ದ ನಮ್ಮ ಟ್ಯಾಂಕರ್‌ಗಳಾದ 'ಮೊಂಬಾಸಾ' ಮತ್ತು 'ಅಲ್ ಬಹಿಯಾ'ಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಿಂದಾಗಿ ಎರಡೂ ಟ್ಯಾಂಕರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಸ್ತುತ ಬೆಂಕಿಯನ್ನು ಹತೋಟಿಗೆ ತರಲಾಗಿದೆ' ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
'ಈ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಘೋರ ಉಲ್ಲಂಘನೆ ಎಂದು ಯುಎಇ ಖಂಡಿಸಿದೆ. ಅಲ್ಲದೆ, ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಗಳಿಗೆ ಅನುಗುಣವಾಗಿ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ' ಎಂದು ಯುಎಇ ಹೇಳಿದೆ.
ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಸಹ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
'ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು ಮತ್ತು ಹೊರ್ಮುಜ್ ಜಲಸಂಧಿಯನ್ನು ಆರ್ಥಿಕ ದಬ್ಬಾಳಿಕೆ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಸಾಧನವಾಗಿ ಬಳಸುವುದು ಕಡಲ್ಗಳ್ಳತನದ ಕೃತ್ಯವಾಗಿದೆ. ಇದು ಈ ಪ್ರದೇಶದ ಸ್ಥಿರತೆಗೆ ಮತ್ತು ಜಾಗತಿಕ ಇಂಧನ ಭದ್ರತೆಗೆ ನೇರ ಬೆದರಿಕೆಯೊಡ್ಡುತ್ತದೆ ಎಂದು ಸಚಿವಾಲಯ ಒತ್ತಿಹೇಳಿದೆ.
'ಇರಾನ್ ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಾದೇಶಿಕ ಭದ್ರತೆ ಕಾಪಾಡಲು, ಜಾಗತಿಕ ಆರ್ಥಿಕತೆ ಹಾಗೂ ವ್ಯಾಪಾರದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೊರ್ಮುಜ್ ಜಲಸಂಧಿಯನ್ನು ಯಾವುದೇ ಷರತ್ತುಗಳಿಲ್ಲದೆ ಸಂಚಾರಕ್ಕೆ ಮುಕ್ತಗೊಳಿಸಬೇಕು' ಎಂದು ಯುಎಇ ಒತ್ತಾಯಿಸಿದೆ.
ಈಚೆಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನಾದ್ಯಂತ 140 ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

