ನವದೆಹಲಿ: ವೀಣಾ ಟಿ ಹಾಗೂ ಅವರ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್ (CMRL) ವತಿಯಿಂದ 2.78 ಕೋಟಿ ರೂ. ಪಾವತಿಸಿರುವುದಕ್ಕೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗಿನ ವೈಯಕ್ತಿಕ ಸಂಬಂಧವೇ ಕಾರಣ ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದೆ.
ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಮುಂದೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ವರದಿಯಲ್ಲಿ ಈ ಆರೋಪ ಮಾಡಲಾಗಿದೆ. ಪ್ರಕರಣದ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ.
ಯಾವುದೇ ಪ್ರತಿ ಸೇವೆಯನ್ನು ಪಡೆಯದೆ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್ 2.78 ಕೋಟಿ ರೂ. ಪಾವತಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಜಾರಿ ನಿರ್ದೇಶನಾಲಯದ ವರದಿ ಪ್ರಕಾರ, ಅಂದಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗಿನ ಸಂಬಂಧದ ಕಾರಣದಿಂದಲೇ ಯಾವುದೇ ಪ್ರತಿ ಸೇವೆಯನ್ನು ಪಡೆಯದೆ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹಣ ಪಾವತಿಸಲಾಗಿತ್ತು ಎಂದು ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸಸಿಧರನ್ ಕಾರ್ತಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು ಎಂದು ಉಲ್ಲೇಖಿಸಲಾಗಿದೆ.
ಕೊಚ್ಚಿ ನ್ಯಾಯಾಲಯದ ಮುಂದೆ ಗಂಭೀರ ವಂಚನೆ ತನಿಖಾ ಕಚೇರಿ (SFIO) ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
2019ರಲ್ಲಿ ಆದಾಯ ತೆರಿಗೆ ಇಲಾಖೆ ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ ವೇಳೆ ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರಗಳು ಹಾಗೂ ಅನುಮಾನಾಸ್ಪದ ಉತ್ಪ್ರೇಕ್ಷಿತ ಖರ್ಚು-ವೆಚ್ಚಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ಸಂಶಯ ವ್ಯಕ್ತವಾಗಿತ್ತು.
ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಲಭ್ಯವಾದ ಮಾಹಿತಿ ಹಾಗೂ SFIO ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಸಲ್ಲಿಸಿರುವ ಇತ್ತೀಚಿನ ವರದಿಯಲ್ಲಿ ವೀಣಾ ಟಿ ಅವರಿಗೆ ಮಾಡಲಾದ 2.78 ಕೋಟಿ ರೂ. ಪಾವತಿ ಮತ್ತು ಅದರ ಹಿನ್ನೆಲೆಯ ಕುರಿತು ವಿವರ ನೀಡಿದೆ. ಪ್ರಕರಣದ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರವನ್ನು ಜಾರಿ ನಿರ್ದೇಶನಾಲಯ ಕೋರಿದೆ.

