ನವದೆಹಲಿ: ಒಡಿಶಾದ ತಾಲಬಿರಾ-II ಕಲ್ಲಿದ್ದಲು ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಬುಧವಾರ ಮುಕ್ತಾಯಗೊಳಿಸಿದೆ. ಜೊತೆಗೆ ಅವರ ವಿರುದ್ಧ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಕೂಡ ರದ್ದುಗೊಳಿಸಿದೆ.
2024ರ ಡಿಸೆಂಬರ್ 27ರಂದು ನಿಧನರಾದ ಮನಮೋಹನ ಸಿಂಗ್ ಅವರಿಗೆ ಈ ತೀರ್ಪಿನೊಂದಿಗೆ ಪ್ರಕರಣದಲ್ಲಿ ಅಧಿಕೃತವಾಗಿ ಕ್ಲೀನ್‌ಚಿಟ್ ದೊರೆತಂತಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠವು ಸಿಬಿಐ ಸಲ್ಲಿಸಿದ್ದ ಮುಕ್ತಾಯದ ವರದಿಯನ್ನು ಅಂಗೀಕರಿಸಿ, ಮನಮೋಹನ ಸಿಂಗ್ ಸೇರಿದಂತೆ ಇತರ ಆರೋಪಿಗಳನ್ನು ಖುಲಾಸೆಗೊಳಿಸಿತು.
ವಿಶೇಷ ನ್ಯಾಯಾಲಯದ ಕ್ರಮ ಸರಿಯಲ್ಲ: ಸುಪ್ರೀಂ ಕೋರ್ಟ್
ಸಿಬಿಐ ಸಲ್ಲಿಸಿದ್ದ ಮುಕ್ತಾಯದ ವರದಿಯನ್ನು ತಿರಸ್ಕರಿಸಿ ಪ್ರಕರಣದ ವಿಚಾರಣೆ ಮುಂದುವರಿಸಲು ವಿಶೇಷ ನ್ಯಾಯಾಲಯ ನಿರ್ಧರಿಸಿದ್ದಕ್ಕೆ ಯಾವುದೇ ಸಮರ್ಪಕ ಕಾರಣ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
'ಮನಮೋಹನ ಸಿಂಗ್ ಅವರ ನಿಧನರಾಗಿದ್ದರಿಂದ ಮೇಲ್ಮನವಿ ತಾಂತ್ರಿಕವಾಗಿ ನಿರರ್ಥಕವಾಗಬಹುದಿತ್ತು. ಆದರೂ ವಿಶೇಷ ನ್ಯಾಯಾಧೀಶರು ಸಿಬಿಐನ ಮುಕ್ತಾಯದ ವರದಿಯನ್ನು ತಿರಸ್ಕರಿಸಿ ಸಮನ್ಸ್ ಹೊರಡಿಸಿದ್ದ ಕ್ರಮವನ್ನು ಪರಿಶೀಲಿಸಿದ್ದೇವೆ. ತನಿಖಾ ಸಂಸ್ಥೆಯ ವರದಿ ಅಂಗೀಕರಿಸುವ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ, ಮುಕ್ತಾಯದ ವರದಿಯನ್ನು ತಿರಸ್ಕರಿಸಲು ಯಾವುದೇ ಕಾರಣ ಇರಲಿಲ್ಲ' ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ?
2005ರಲ್ಲಿ ಒಡಿಶಾದ ತಾಲಬಿರಾ-II ಕಲ್ಲಿದ್ದಲು ಬ್ಲಾಕ್ ಅನ್ನು ಹಿಂಡಾಲ್ಕೊ ಇಂಡಸ್ಟ್ರೀಸ್‌ಗೆ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿವಾದ ಉದ್ಭವಿಸಿತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಬಳಿಯೇ ಕಲ್ಲಿದ್ದಲು ಖಾತೆಯೂ ಇತ್ತು.
ವಿಶೇಷ ಸಿಬಿಐ ನ್ಯಾಯಾಲಯವು ಮನಮೋಹನ್ ಸಿಂಗ್, ಉದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್, ಹಿಂಡಾಲ್ಕೊ ಇಂಡಸ್ಟ್ರೀಸ್, ಅದರ ಅಧಿಕಾರಿಗಳಾದ ಶುಭೇಂದು ಅಮಿತಾಭ್ ಮತ್ತು ಡಿ. ಭಟ್ಟಾಚಾರ್ಯ ಸೇರಿದಂತೆ ಆರು ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.
ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ (ಅಪರಾಧಿಕ ಸಂಚು) ಮತ್ತು 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ) ಕಲಂಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು.
ಸಿಬಿಐನ ನಿಲುವೇನು?
ಪ್ರಾರಂಭದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ್ದರೂ, ನಂತರ ತನಿಖೆಯಲ್ಲಿ ಅಪರಾಧ ಸಾಬೀತಾಗುವಂತಹ ಸಾಕ್ಷ್ಯಾಧಾರ ದೊರೆಯದ ಹಿನ್ನೆಲೆಯಲ್ಲಿ ಮುಕ್ತಾಯದ ವರದಿ ಸಲ್ಲಿಸಿತ್ತು. ಆದರೆ ವಿಶೇಷ ನ್ಯಾಯಾಲಯ ಅದನ್ನು ತಿರಸ್ಕರಿಸಿ ಮನಮೋಹನ್ ಸಿಂಗ್ ಸೇರಿದಂತೆ ಕೆಲ ಮಾಜಿ ಪ್ರಧಾನಿ ಕಚೇರಿ ಅಧಿಕಾರಿಗಳ ವಿಚಾರಣೆಗೂ ಸೂಚಿಸಿತ್ತು.
ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದೀಗ ಸಿಬಿಐನ ಮುಕ್ತಾಯ ವರದಿಯನ್ನು ಅಂಗೀಕರಿಸುವ ಮೂಲಕ ಪ್ರಕರಣಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದೆ.

