ನವದೆಹಲಿ: ಬಿಜೆಪಿ ಸಂಸದೆ ಕಂಗನಾ ರನೌತ್ ಮತ್ತು ಸಿಜೆಪಿ ನಡುವಿನ ವಾಕ್‌ಸಮರ ಮುಂದುವರಿದಿದೆ. ಸಿಜೆಪಿ ಕುರಿತು ನೀಡಿದ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಕಂಗನಾ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತಳಾಗಿ ಸೆಲ್ಫಿ ವಿಡಿಯೊ ಮಾಡುತ್ತಿದ್ದೇನೆ' ಎಂದು ಕ್ಯಾಪ್ಶನ್ ಬರೆದುಕೊಂಡಿರುವ ಕಂಗನಾ, ಗುರು ಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.
ವಿಡಿಯೊದಲ್ಲಿ ಕಂಗನಾ, 'ಸ್ನೇಹಿತರೇ, ಮಾಧ್ಯಮದ ಮಿತ್ರರಿಗಾಗಿ ನಾನು ಈ ವಿಡಿಯೋವನ್ನು ಮಾಡುತ್ತಿದ್ದೇನೆ. ಏಕೆಂದರೆ, ಕೆಲವು ಪ್ರತಿಭಟನಾಕಾರರು ರಸ್ತೆಯಲ್ಲಿ, ಮಕ್ಕಳ ಮುಂದೆ, ಹಿರಿಯರ ಮುಂದೆ, ಮಹಿಳೆಯರ ಮುಂದೆ ಪ್ರದರ್ಶಿಸಿದ ಕೆಟ್ಟ, ಅನೈತಿಕ ಹಾಗೂ ಅಶ್ಲೀಲ ವರ್ತನೆಯನ್ನು ಸಾಮಾನ್ಯ ಎನ್ನುವಂತೆ ಬಿಂಬಿಸಿರುವುದನ್ನು ನಾನು ವಿರೋಧಿಸಿದ್ದೇನೆ. ಇಂತಹ ನಡವಳಿಕೆಗಳನ್ನು ನಮ್ಮ ಸಮಾಜದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮನೆಗಳಲ್ಲಿ ಮಕ್ಕಳಿದ್ದಾರೆ. ಅಶ್ಲೀಲ ನಡವಳಿಕೆಯಿಂದ ಮನೆಯ ಹಿರಿಯರ ಮುಂದೆ ನಮಗೆ ಮುಜುಗರ ಉಂಟುಮಾಡುವುದು ಸರಿಯಲ್ಲ. ನಾವು ಇಂತಹ ನಡವಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ.
'ಆದರೆ ಮಾಧ್ಯಮಗಳು ನನ್ನ ವಿರುದ್ಧ ತಂಡ ಕಟ್ಟಿಕೊಂಡು ಮಾತನಾಡುತ್ತಿವೆ. ಸ್ಟಾರ್ಟ್‌ಅಪ್‌ಗಳಲ್ಲಿ ನಮ್ಮ ದೇಶದ ಜೆನ್-ಝೀ ಯುವಕರು ಮಾಡುತ್ತಿರುವ ಸಾಧನೆ, ನೀಟ್ ಪರೀಕ್ಷೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು, ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊರುತ್ತಿರುವ ಯುವಕರನ್ನು ಪ್ರಶಂಸಿಸುತ್ತೇನೆ. ನಮ್ಮ ಸಿನಿಮಾ ಕ್ಷೇತ್ರದಲ್ಲಿ, ಮನೆಗಳಲ್ಲಿ, ಸಂಬಂಧಿಕರಲ್ಲಿ ಎಷ್ಟೋ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನು ಮಾಧ್ಯಮ ತೋರಿಸುವುದಿಲ್ಲ. ಆದರೆ ಫಾಲೋವರ್ಸ್‌ಗಳು, ಕಮೆಂಟ್‌ಗಳು ಮತ್ತು ಲೈಕ್ಸ್‌ಗಳಿಗಾಗಿ ಈ ಮಾಧ್ಯಮದವರು ಮಾರಾಟವಾಗಿದ್ದಾರೆ. ಕೆಲವು ಸ್ತ್ರೀವಾದಿ ಪತ್ರಕರ್ತರು, 'ನಾವಾದರೆ ಮಿಲೇನಿಯಲ್ ಮಹಿಳೆಯರು, ನಮಗೆ ಹೀಗೇ ಇರಬೇಕೆಂದು ಕಟ್ಟುಪಾಡಿತ್ತು. ಅದನ್ನು ಈ ಕಾಲದ ಮಹಿಳೆಯರೂ ಪಾಲಿಸಬೇಕು ಎಂದು ಯಾಕೆ ಹೇರುತ್ತೀರಿ' ಎಂದು ಕೇಳುತ್ತಿದ್ದಾರೆ.
'ಕ್ಷಮಿಸಿ, ನೀವು ನಿಮ್ಮ ಮಗಳಿಗೆ ಅಶಿಸ್ತಿನಿಂದ ಇರುವುದು ಅಥವಾ ಮರ್ಯಾದೆ ಇಲ್ಲದೆ ಇರುವುದು ನಿಮ್ಮಿಷ್ಟ ಎಂದು ಕಲಿಸುತ್ತೀರಾ? ತಮ್ಮಿಷ್ಟದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರಿಗೂ ಇಷ್ಟವಿರಬಹುದು. ಆದರೆ ನೀವು ಸಮಾಜದಲ್ಲಿ ಜೀವಿಸಬೇಕೆಂದರೆ, ಸಂವಿಧಾನದ ಪ್ರಕಾರ ನಡೆಯಬೇಕು.
ನಿಮ್ಮ ಅಸಭ್ಯ ನಡವಳಿಕೆಯನ್ನು ನಿಮ್ಮ ಮನೆಯಲ್ಲಿ ಮಾತ್ರ ಇಟ್ಟುಕೊಳ್ಳಬಹುದು. ಹೊರಗೆ ಬಂದು ನನ್ನ ಆರಾಧ್ಯ ದೇವರು, ನನ್ನ ಪೋಷಕರು, ನನ್ನ ಮನೆಯ ಮಕ್ಕಳ ಬಗ್ಗೆ ಭಾವನೆಗಳಿಲ್ಲದಂತೆ ನಡೆದುಕೊಳ್ಳುವುದು, ರಸ್ತೆಯಲ್ಲಿ ಕೆಟ್ಟ, ಅಶ್ಲೀಲ ನಿಂದನೆಗಳನ್ನು ಮಾಡುವುದು, ಅವರ ಗೌರವಕ್ಕೆ ಧಕ್ಕೆ ತರುವುದು ಸರಿಯಲ್ಲ.
ಪ್ರಧಾನ ಮಂತ್ರಿಯವರನ್ನು ಮಕ್ಕಳು 'ಎಕ್ಸಾಮ್ ಬಡ್ಡಿ' ಎಂದು ಕರೆಯುತ್ತಾರೆ. ಎಷ್ಟೋ ಜನರ ಭಾವನೆಗಳು ಅವರೊಂದಿಗೆ ಬೆಸೆದುಕೊಂಡಿವೆ. ಅವರನ್ನು ನಾಯಕನೆಂದು, ಸ್ನೇಹಿತನೆಂದು, ಕುಟುಂಬದವನೆಂದು, ದೇವರೆಂದು ಭಾವಿಸುವವರ ಭಾವನೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಈ ರೀತಿ ನಡೆದುಕೊಳ್ಳುವುದು ಜಾಣತನವಲ್ಲ, ಇದು ಯುವ ಜನತೆಗೆ ಇರಬೇಕಾದ ಸಾಮಾನ್ಯ ಪ್ರಜ್ಞೆಯಾಗಿದೆ. ನಿಮಗೆ ಇದು ತಿಳಿಯದಿದ್ದರೆ ಕಲಿಯಬೇಕಾಗುತ್ತದೆ.
ಅತಿಯಾದ ಸ್ತ್ರೀವಾದಿ ಯೋಚನೆಗಳಿಂದ ಪ್ರಭಾವಿತರಾಗಿ ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಈ ಅಸಭ್ಯತೆಯನ್ನು ನಿಮ್ಮ ಕೊಠಡಿಯಲ್ಲಿ ಮಾತ್ರ ಇಟ್ಟುಕೊಳ್ಳಿ. ಹೊರಗೆ ಬಂದರೆ ಮರ್ಯಾದೆಯಿಂದ ಇರಬೇಕಾಗುತ್ತದೆ, ಇಲ್ಲವಾದರೆ ಇರುವ ಕೆಲಸ ಕಳೆದುಕೊಳ್ಳುತ್ತೀರಿ. ಕುಟುಂಬದವರೂ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ.
ವಿಜ್ಞಾನ ಮತ್ತು ಶಾಸ್ತ್ರಗಳು ಹೇಳುವುದು ಏನೆಂದರೆ, ಮನುಷ್ಯನು ವಿಕಸನ ಹೊಂದಲು ಜನ್ಮ ತಳೆದಿದ್ದಾನೆ. ಆದರೆ ಈ ಸ್ತ್ರೀವಾದಿಗಳು, ನಿಮ್ಮನ್ನು ಪ್ರಾಣಿಗಳಂತೆ ನಡೆದುಕೊಳ್ಳಲು, ಜೈಲು ಸೇರಲು ಪ್ರಚೋದಿಸುತ್ತಿದ್ದಾರೆ.
ನಿಮಗೆ ಯಾರು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದನ್ನು ನೀವೇ ನಿರ್ಧರಿಸಿ. ನಮಗೆ ಸಿಕ್ಕಿರುವ ಈ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು, ವಿಕೃತಗೊಳಿಸಿಕೊಳ್ಳಬಾರದು ಎಂದು ನಮ್ಮ ಹಿರಿಯರು ಮತ್ತು ಗುರುಗಳು ಹೇಳಿಕೊಟ್ಟಿದ್ದಾರೆ. ಆದ್ದರಿಂದ ದಯವಿಟ್ಟು ಬುದ್ಧಿಯನ್ನು ಬೆಳೆಸಿಕೊಳ್ಳಿ. ಎಲ್ಲರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು' ಎಂದು ಹೇಳಿದ್ದಾರೆ.

