ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಹಲವು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಅಸಭ್ಯ ಭಾಷೆ ಬಳಸಿದವರ ವಿವರಗಳನ್ನು ನೀಡುವಂತೆ ಟ್ವಿಟರ್ (ಎಕ್ಸ್) ಸಂಸ್ಥೆಗೆ ಪೊಲೀಸರು ಸೂಚನೆ ನೀಡಿದ್ದು, ನೋಟಿಸ್ ಪಡೆದ ಖಾತೆಗಳಲ್ಲಿ ಕೆಲವು ಸುದ್ದಿ ಪೋರ್ಟಲ್‌ಗಳ ಖಾತೆಗಳೂ ಸೇರಿವೆ ಎಂದು ತಿಳಿದುಬಂದಿದೆ.
ಪ್ರತಿಭಟನೆಯ ಸಮಯದಲ್ಲಿ ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೊ, ಕಮೆಂಟ್ ಹಾಗೂ ಪೋಸ್ಟ್‌ಗಳನ್ನು ದೆಹಲಿ ಪೊಲೀಸರ ಸೈಬರ್ ತಂಡವು ಸೂಕ್ಷ್ಮವಾಗಿ ಪರಿಶೀಲಿಸಿದೆ. ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ಪ್ರತಿಭಟನೆಯ ನೆಪದಲ್ಲಿ ಸುಳ್ಳು ಸುದ್ದಿ, ವದಂತಿ ಮತ್ತು 'ಡೀಪ್‌ಫೇಕ್' ವಿಡಿಯೊ ಹರಡುತ್ತಿದ್ದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆ ಹಾಗೂ ಜುಲೈ 20ರ 'ಸಂಸತ್ ಚಲೊ' ವೇಳೆ ಮೋದಿ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಒಳಗೊಂಡಿದ್ದ ಹಲವು ವಿಡಿಯೊ ಮತ್ತು ಪೋಸ್ಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಲಾಗಿತ್ತು. ಪೊಲೀಸರ ನಿರ್ದೇಶನದಂತೆ ಈಗಾಗಲೇ ಹಲವು ಅಸಭ್ಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ.

