ಅದು 2024ರ ಜುಲೈ 30ರ ಮಧ್ಯರಾತ್ರಿ. ಚೂರಲ್‌ಮಲ ಹಾಗೂ ಮುಂಡಕ್ಕೈ ಪ್ರದೇಶದಲ್ಲಿ ಜನರೆಲ್ಲ ನಿದ್ರೆಗೆ ಜಾರಿದ್ದಾಗ, ಸಂಭವಿಸಿದ ಭೀಕರ ಭೂಕುಸಿತ ಇಡೀ ಗ್ರಾಮವನ್ನೇ ನುಂಗಿಹಾಕಿತ್ತು. ಕ್ಷಣಾರ್ಧದಲ್ಲಿ ನೂರಾರು ಜನರ ಜೀವ, ಕನಸು, ಮನೆ-ಮಠಗಳೆಲ್ಲ ಮಣ್ಣಿನಡಿಯಲ್ಲಿ ಸಮಾಧಿಯಾಗಿದ್ದವು.
ಆ ಘಟನೆ ನಡೆದು ಇಂದಿಗೆ ಭರ್ತಿ ಎರಡು ವರ್ಷಗಳು ಕಳೆದಿವೆ. ಕೇರಳಂನ ಕಲ್ಪೆಟ್ಟ ಬೈಪಾಸ್ ಬಳಿ ನಿರ್ಮಿಸಲಾದ ಟೌನ್‌ಶಿಪ್‌ನಲ್ಲಿ ಅನೇಕ ಕುಟುಂಬಗಳಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ, ಆ ರಾತ್ರಿ ಉಂಟಾದ ಕರಾಳ ಗಾಯಗಳು ಮತ್ತು ಮನಸ್ಸಿನೊಳಗಿನ ಭಯ ಮಾತ್ರ ಇಂದಿಗೂ ಮಾಸಿಲ್ಲ.
ವಯನಾಡ್ ದುರಂತಕ್ಕೆ ಎರಡು ವರ್ಷಗಳಾದರೂ, ಆ ಕರಾಳ ರಾತ್ರಿಯ ನೋವು ಮತ್ತು ಭಯ ಸಂತ್ರಸ್ತರ ಬದುಕಿನಲ್ಲಿ ಇಂದಿಗೂ ಆಳವಾಗಿ ಉಳಿದುಕೊಂಡಿದೆ.
ವಯನಾಡ್ ದುರಂತ ಯಾವಾಗ ಮತ್ತು ಎಲ್ಲಿ ಸಂಭವಿಸಿತು?
2024ರ ಜುಲೈ 30ರ ಮಧ್ಯರಾತ್ರಿ ಕೇರಳದ ವಯನಾಡ್ ಜಿಲ್ಲೆಯ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ಭೀಕರ ಭೂಕುಸಿತ ಸಂಭವಿಸಿತು.
ದುರಂತದಿಂದ ಸಂತ್ರಸ್ತರಿಗೆ ಉಂಟಾದ ಸಾವುನೋವುಗಳೇನು?
ಈ ಭೀಕರ ನೈಸರ್ಗಿಕ ವಿಕೋಪದಲ್ಲಿ ಸುಮಾರು 400 ಮಂದಿ ಮಣ್ಣಾಗಿ ಹೋಗಿದ್ದು, ನೂರಾರು ಕುಟುಂಬಗಳು ತಮ್ಮ ಮನೆ ಮತ್ತು ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿವೆ.
ಸರ್ಕಾರ ಸಂತ್ರಸ್ತರಿಗೆ ನೀಡಿರುವ ಪುನರ್ವಸತಿ ಸೌಲಭ್ಯಗಳೇನು?
ಸರ್ಕಾರವು ಸಂತ್ರಸ್ತರಿಗಾಗಿ ಕಲ್ಪೆಟ್ಟ ಟೌನ್‌ಶಿಪ್‌ನಲ್ಲಿ 410 ಮನೆಗಳನ್ನು ನಿರ್ಮಿಸುತ್ತಿದ್ದು, ಇದುವರೆಗೆ 165 ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ.
ಇನ್ನೂ ಎಷ್ಟು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ನೆಲೆಸಿವೆ?
ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೂ, ಪ್ರಸ್ತುತ 149 ಕುಟುಂಬಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ.
ಸಂತ್ರಸ್ತರು ಇಂದಿಗೂ ಯಾವ ಆತಂಕವನ್ನು ಎದುರಿಸುತ್ತಿದ್ದಾರೆ?
ಹೊಸ ಮನೆಗಳು ಸಿಕ್ಕಿದ್ದರೂ, ಮಳೆಗಾಲದಲ್ಲಿ ಮೋಡ ಕವಿದು ಮಳೆ ಬಂದರೆ ಆ ಕರಾಳ ರಾತ್ರಿಯ ನೆನಪಿನಿಂದ ಸಂತ್ರಸ್ತರು ಇಂದಿಗೂ ಭೀತಿಗೊಳ್ಳುತ್ತಾರೆ.
2024ರ ಜುಲೈ 30ದುರಂತ ಸಂಭವಿಸಿದ ದಿನಾಂಕ400ಮಣ್ಣಾದ ಅಂದಾಜು ಜನರ ಸಂಖ್ಯೆ410ನಿರ್ಮಾಣವಾಗುತ್ತಿರುವ ಒಟ್ಟು ಮನೆಗಳು165ಹಸ್ತಾಂತರಿಸಲಾದ ಮನೆಗಳ ಸಂಖ್ಯೆ149ಬಾಡಿಗೆ ಮನೆಯಲ್ಲಿರುವ ಕುಟುಂಬಗಳು
ಇಂದು (ಗುರುವಾರ) ಬೆಳಿಗ್ಗೆ, ಈ ಟೌನ್‌ಶಿಪ್‌ನಲ್ಲಿ ನಡೆದ ಸ್ಮರಣಾ ಕಾರ್ಯಕ್ರಮದಲ್ಲಿ ಮೌನ ಆವರಿಸಿತ್ತು. ತಮ್ಮ ಕುಟುಂಬಸ್ಥರ ಫೋಟೊಗಳ ಮುಂದೆ ದೀಪ ಬೆಳಗಿ, ಹೂವನ್ನಿಟ್ಟು ಅನೇಕರು ಕಣ್ಣೀರಿಡುತ್ತಿದ್ದರು. ಕೆಲವರಂತೂ ಆ ದುರಂತದಲ್ಲಿ ಅರ್ಧದಲ್ಲೇ ಉಸಿರುಚೆಲ್ಲಿದ ಪುಟ್ಟ ಮಕ್ಕಳ ಫೋಟೊಗಳ ಮುಂದೆ ಆಟಿಕೆಗಳು ಮತ್ತು ಚಾಕೊಲೇಟ್‌ಗಳನ್ನು ಇಟ್ಟು, ಗದ್ಗದಿತರಾದರು.
ಚೂರಲ್‌ಮಲ ಪ್ರದೇಶದಲ್ಲಿ ವಾಸಿಸುತ್ತಿದ್ದ ಶೋಭನಾ ಮತ್ತು ಅಪ್ಪು ದಂಪತಿಗೆ ಇಂದು ಹೊಸ ಮನೆಯೇನೋ ಸಿಕ್ಕಿದೆ. ಆದರೆ, ಅಂದು ಕೊಚ್ಚಿಹೋದ ತಮ್ಮ ಪುಟ್ಟ ಮೊಮ್ಮಗಳು ಅಹನ್ಯಾಳ ನೆನಪು ಪ್ರತಿಯೊಂದು ಕ್ಷಣವೂ ಅವರನ್ನು ಕಾಡುತ್ತಿದೆ.
ಮನೆಯ ನಾಲ್ವರು ಸದಸ್ಯರಲ್ಲಿ, ಹಿರಿಯ ಮೊಮ್ಮಗಳು ಅಹನ್ಯಾ ಭೂಕುಸಿತದಲ್ಲಿ ಕೊಚ್ಚಿಹೋದಳು. ಆ ಸಮಯದಲ್ಲಿ ಸೊಸೆ ಪ್ರಜಿತಾ ಎರಡು ತಿಂಗಳ ಗರ್ಭಿಣಿ. ಬಳಿಕ ಅವರು ನವನ್ಯಾಗೆ ಜನ್ಮ ನೀಡಿದ್ದರು. ಈಗ ಆಕೆಗೆ ಒಂದೂವರೆ ವರ್ಷ. ಅವಳೇ ಈ ಕುಟುಂಬದ ನಗು, ಸಂತೋಷ ಎಲ್ಲವೂ ಆಗಿದ್ದಾರೆ. ದುರಂತ ಸಂಭವಿಸಿದಾಗ ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ಮಗ ಅಭಿಲಾಷ್ ಅಲ್ಲಿಂದ ಹಿಂತಿರುಗಿ ಈಗ ಕಲ್ಪೆಟ್ಟ ಟೌನ್‌ಶಿಪ್‌ನಲ್ಲಿ ವಾಸಿಸುತ್ತಿದ್ದಾರೆ.
'ಮನೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ, ಆದರೆ ನಮ್ಮ ಪುಟ್ಟ ಮಗಳನ್ನು ಕಳೆದುಕೊಂಡ ನೋವು ಮಾಸುವುದಿಲ್ಲ' ಎಂದು ಕಣ್ಣೀರಾದರು ಶೋಭನಾ.
ಚೂರಲ್‌ಮಲದ ಮಾರಿ ಅಮ್ಮ ಮತ್ತು ಮಾಡಸಾಮಿ ದಂಪತಿಯದ್ದು ಮತ್ತೊಂದು ನೋವಿನ ಕಥೆ. ಅಂದು ರಾತ್ರಿ 1:20ಕ್ಕೆ ಕೇಳಿಸಿದ ಆ ಭಯಾನಕ ಶಬ್ದ ಮತ್ತು ಕ್ಷಣಾರ್ಧದಲ್ಲಿ ಹೆದರಿ ಓಡಿದ ದೃಶ್ಯ ಇಂದಿಗೂ ಅವರ ಕಣ್ಣಿಗೆ ಕಟ್ಟಿದಂತಿದೆ.
ಮಗನ ಸಹಾಯದಿಂದ ತೋಟದ ಕಡೆಗೆ ಓಡಿ ಪ್ರಾಣ ಉಳಿಸಿಕೊಂಡರೂ, ತಮ್ಮ ಅರ್ಧ ಎಕರೆ ಜಮೀನು, ಮನೆ, ಅಣ್ಣ ಹಾಗೂ ಆತನ ಮಗನನ್ನು ಅವರು ಕಳೆದುಕೊಂಡಿದ್ದಾರೆ. ಇಡೀ ಜೀವಮಾನ ಕಷ್ಟಪಟ್ಟು ಸಂಪಾದಿಸಿದ್ದನ್ನೆಲ್ಲ ಒಂದೇ ರಾತ್ರಿಯಲ್ಲಿ ಕಳೆದುಕೊಂಡೆವು ಎನ್ನುತ್ತಾರೆ ಮಾರಿ ಅಮ್ಮ.
ಪುಂಚಿರಿಮಟ್ಟಂನ ತಂಕಾ ಎಂಬ ವೃದ್ಧೆಯ ಕಥೆಯಂತೂ ಕರುಳು ಹಿಂಡುವಂತದ್ದು. ಆ ದುರಂತದಲ್ಲಿ ಅವರು ತಮ್ಮ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದಾರೆ. ಆ ಜುಲೈ 30ರ ದಿನವನ್ನು ಮತ್ತೆ ಎಂದೂ ನೆನಪಿಸಿಕೊಳ್ಳಲು ನನಗೆ ಇಷ್ಟವಿಲ್ಲ, ಆದರೆ ನೆನಪುಗಳು ಬಿಡುತ್ತಿಲ್ಲ ಎಂದು ಅವರು ನಿಟ್ಟುಸಿರು ಬಿಟ್ಟರು.
'ನಮ್ಮ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾವು ಎಲ್ಲವನ್ನೂ ಕಳೆದುಕೊಂಡೆವು. ನಮ್ಮ ಮನೆಯನ್ನು ಕಳೆದುಕೊಂಡಿದ್ದಕ್ಕಿಂತ, ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡಿರುವ ನೋವೇ ಹೆಚ್ಚು' ಎಂದು ದುರಂತದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ಭಾವುಕರಾದರು.
ಮುಂಡಕ್ಕೈ ಮತ್ತು ಚೂರಲ್‌ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಹಾನಿಗೊಳಗಾದ ಕುಟುಂಬಗಳಿಗೆ ಕಲ್ಪೆಟ್ಟ ಬೈಪಾಸ್ ಬಳಿಯ ಎಲ್‌ಸ್ಟನ್ ಎಸ್ಟೇಟ್ ಪ್ರದೇಶದಲ್ಲಿ 'ಟೌನ್‌ಶಿಪ್' ನಿರ್ಮಿಸಲಾಗುತ್ತಿದೆ.
ಅದರ ಭಾಗವಾಗಿ 410 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಪೈಕಿ 165 ಕುಟುಂಬಗಳಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಇಂದಿಗೂ 149 ಕುಟುಂಬಗಳು ಜಿಲ್ಲೆಯ ವಿವಿಧೆಡೆ ಸೋರುವ ಬಾಡಿಗೆ ಮನೆಗಳಲ್ಲೇ ಕಾಲ ದೂಡುತ್ತಿವೆ.
2024ರ ಜುಲೈ 30. ಕೇರಳಂನ ವಯನಾಡ್ ಜಿಲ್ಲೆ ಭಾರಿ ಅವಘಡಕ್ಕೆ ಸಾಕ್ಷಿಯಾಗಿತ್ತು. ಮುಂಡಕ್ಕೈ, ಚೂರಲ್‌ಮಲದಲ್ಲಿ ಭೂಕುಸಿತ ಉಂಟಾಗಿ ಸುಮಾರು 400 ಮಂದಿ ಮಣ್ಣಾಗಿಹೋಗಿದ್ದರು.
ಹೊಸ ಮನೆಗಳು ಅವರಿಗೆ ತಲೆಯ ಮೇಲೆ ಸೂರು ಕೊಟ್ಟಿರಬಹುದು, ಆದರೆ ಮೋಡ ಕವಿದು ತುಸು ಜೋರಾಗಿ ಮಳೆ ಬಂದರೆ ಅಥವಾ ನದಿಯಲ್ಲಿ ನೀರು ಹೆಚ್ಚಾದರೆ ಸಾಕು... ಈ ಸಂತ್ರಸ್ತರ ಎದೆ ಕಂಪಿಸುತ್ತದೆ. ಆ ಕರಾಳ ರಾತ್ರಿಯ ನೆನಪುಗಳು ಮತ್ತೆ ಮರುಕಳಿಸಿ, ಇಡೀ ರಾತ್ರಿ ಅವರ ನಿದ್ರೆಯನ್ನು ಕಸಿದುಕೊಳ್ಳುತ್ತವೆ.

