ಅಹ್ಮದಾಬಾದ್: ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಮೇಲೆ ಶೇ.20 ರಷ್ಟು ಖಾತರಿ ಲಾಭದ ಭರವಸೆ ನೀಡಿ ವಂಚಿಸಿರುವ ಘಟನೆ ಗುಜರಾತಿನ ಸೌರಾಷ್ಟ್ರದಲ್ಲಿ ನಡೆದಿದೆ. ಸುಮಾರು 300ರಿಂದ 400 ಕೋಟಿ ರೂ.ಗಳಷ್ಟು ವಂಚಿಸಲಾಗಿದೆ. 30 ಕ್ಕೂ ಹೆಚ್ಚು ಗ್ರಾಮಗಳ ಸುಮಾರು 100 ಜನರು ತಾವು ವಂಚನೆಗೊಳಗಾಗಿದ್ದೇವೆ ಎಂದು ಆರೋಪಿಸಿದ್ದು,ಇವರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಸ್ಥಳೀಯ ವರದಿಗಳ ಪ್ರಕಾರ ಯೋಗೇಶ್ ಧಮೇಚಾ ಮತ್ತು ಸಂಜಯ್ ಧಮೇಚಾ ಎಂಬ ಸೋದರ ಸಂಬಂಧಿಗಳು ಈ ವಂಚನೆ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಆರಂಭದ ಹೂಡಿಕೆದಾರರಿಗೆ ಭರವಸೆ ನೀಡಿದ ಲಾಭವನ್ನು ಪಾವತಿಸಲು ಹೊಸ ಹೂಡಿಕೆದಾರರ ಹಣವನ್ನು ಬಳಸುತ್ತಿದ್ದರು. ಜನರ ನಂಬಿಕೆಯನ್ನು ಗಳಿಸಲು ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಈ ವಿಷಯ ಹರಡುವಂತೆ ಮಾಡಲು ಇವರು ಈ ತಂತ್ರವನ್ನು ಬಳಸಿದ್ದರು. ಆದರೆ ಎರಡು ತಿಂಗಳುಗಳ ಹಿಂದೆ ಅವರ ವಂಚನೆ ಬಯಲಾಗಿದ್ದು,ಅಷ್ಟರಲ್ಲೇ ಇಬ್ಬರೂ ಆರೋಪಿಗಳು ಕೋಟ್ಯಂತರ ರೂಪಾಯಿಗಳನ್ನು ದೋಚಿ ನಾಪತ್ತೆಯಾಗಿದ್ದರು.
ಇಬ್ಬರೂ ಸೋದರ ಸಂಬಂಧಿಗಳನ್ನು ಬಂಧಿಸಲಾಗಿದ್ದು, ವಿವರವಾದ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ. ತನಿಖೆ ತೀವ್ರಗೊಂಡಂತೆ ಯೋಗೇಶ ಧಮೇಚಾ ಕಳೆದ ಎರಡು ವರ್ಷಗಳಿಂದ ಭಾವನಗರದಲ್ಲಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ರಾಜಕೀಯ ನಂಟಿನ ಬಹಿರಂಗವು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು,ಸಂತ್ರಸ್ತರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾರೂಢ ಪಕ್ಷದಲ್ಲಿನ ತನ್ನ ಪ್ರಭಾವಶಾಲಿ ಸ್ಥಾನವನ್ನು ಬಳಸಿಕೊಂಡು ಯೋಗೇಶ್ ಸಾಮಾನ್ಯ ಜನರಲ್ಲಿ ಸುಲಭವಾಗಿ ನಂಬಿಕೆ ಹುಟ್ಟಿಸಿದ್ದ ಮತ್ತು ಕಾನೂನು ಕ್ರಮದಿಂದ ಪಾರಾಗಲು ಈ ಅಧಿಕಾರವನ್ನು ಬಳಸುತ್ತಿದ್ದನೇ ಎಂಬ ಸಂಶಯಗಳು ಈಗ ವ್ಯಕ್ತವಾಗುತ್ತಿವೆ.

