ಸೇಲಂ: 'ಬಾಂಗ್ಲಾದೇಶದ ಐವತ್ತು ನಾಗರಿಕರನ್ನು ಗಡಿಪಾರು ಮಾಡಿದ್ದು, ತಾಯ್ನಾಡಿಗೆ ಮರಳಿಸುವ ಭಾಗವಾಗಿ ಪಶ್ಚಿಮ ಬಂಗಾಳದ ವಿದೇಶಿ ನಿರಾಶ್ರಿತರ ಕೇಂದ್ರಕ್ಕೆ ರೈಲಿನ ಮೂಲಕ ಕಳಿಸಲಾಗಿದೆ' ಎಂದು ತಮಿಳುನಾಡು ಪೊಲೀಸರು ಶನಿವಾರ ತಿಳಿಸಿದ್ದಾರೆ.
'44 ಪುರುಷರು ಮತ್ತು ಆರು ಮಹಿಳೆಯರನ್ನು ಸೇಲಂ ಜಿಲ್ಲೆಯ ಅಟ್ಟೂರು ತಾಲೂಕಿನ ವಿದೇಶಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.
ಗಡಿಪಾರು ಕುರಿತ ಅಧಿಕೃತ ಆದೇಶದ ನಂತರ ತಿರುಚಿರಾಪಲ್ಲಿಗೆ ಕರೆದೊಯ್ದು, ಹೌರಾ ಎಕ್ಸ್‌ಪ್ರೆಸ್ ರೈಲಿನ ಮೂಲಕ 40 ಸಶಸ್ತ್ರ ಪೊಲೀಸರ ಬಿಗಿ ಭದ್ರತೆಯಲ್ಲಿ ಕಳುಹಿಸಲಾಗಿದೆ' ಎಂದು ಸಶಸ್ತ್ರ ಪೊಲೀಸ್ ಪಡೆಯ ಡಿಎಸ್‌ಪಿ ಶಕ್ತಿವೇಲ್ ತಿಳಿಸಿದ್ದಾರೆ.
ತಮಿಳುನಾಡು ಪೊಲೀಸರು ಪಶ್ಚಿಮ ಬಂಗಾಳದ ಹರಿದಾಸಪುರ ಗಡಿ ಪ್ರದೇಶದ ಗಡಿ ಭದ್ರತಾ ಪಡೆಗೆ ನಿರಾಶ್ರಿತರನ್ನು ಹಸ್ತಾಂತರ ಮಾಡಲಿದ್ದಾರೆ. ಆನಂತರ ಬಾಂಗ್ಲಾದೇಶಕ್ಕೆ ಇವರ ಅಂತಿಮ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

