ಕಾಸರಗೋಡು: ಕಾಞಂಗಾಡ್ ನಗರಸಭೆಯ ನಿರ್ಲಕ್ಷ್ಯ ಮತ್ತು ಮೂಲ ಸೌಲಭ್ಯಗಳ ಅಸಮರ್ಪಕತೆಯ ವಿರುದ್ಧ ಜುಲೈ 7 ರಂದು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಲಿದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಗರಸಭೆ ಕಚೇರಿಗೆ ಮೆರವಣಿಗೆ ನಡೆಸಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಸಂಚಾರ ಸುಧಾರಣೆಗಳಲ್ಲಿನ ನ್ಯೂನತೆಗಳು, ರಸ್ತೆಬದಿಯ ಅಕ್ರಮ ಮಾರಾಟ ಕೇಂದ್ರಗಳು ಮತ್ತು ಅಕ್ರಮ ಆಟೋರಿಕ್ಷಾ ನಿಲ್ದಾಣಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಾಞಂಗಾಡ್‍ನಲ್ಲಿ ಮಾತ್ರ 40 ಮಳಿಗೆಗಳನ್ನು ನಗರಸಭೆಯ ತಪ್ಪು ನೀತಿಗಳಿಂದಾಗಿ ಮುಚ್ಚಬೇಕಾಯಿತು ಎಂದು ವ್ಯಾಪಾರಿ ಮುಖಂಡರು ಆರೋಪಿಸಿದ್ದಾರೆ. ಹೆಚ್ಚಿನ ವೆಚ್ಚದಲ್ಲಿ ಪರವಾನಗಿಗಳೊಂದಿಗೆ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಹಾನಿ ಮಾಡುವ ಕ್ರಮಗಳನ್ನು ಇನ್ನು ಮುಂದೆ ಅನುಮತಿಸಲಾಗದು ಎಂದು ಅವರು ಹೇಳಿದ್ದಾರೆ.
ಕುಂಬಳೆಯಲ್ಲಿ ಮತ್ತೊಂದು ಸವಾಲು:
ಕುಂಬಳೆಯಲ್ಲಿ ವ್ಯಾಪಾರಿಗಳು ಇದೇ ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ಬಸ್‍ಗಳ ಅಕ್ರಮ ವರ್ತನೆ, ದಶಕಗಳಿಂದ ಭರವಸೆ ನೀಡಲಾಗಿರುವ ಹೊಸ ಬಸ್ ನಿಲ್ದಾಣ ಮತ್ತು ಮೀನು ಮಾರುಕಟ್ಟೆಯಲ್ಲಿನ ಅನಾನುಕೂಲತೆಗಳ ವಿರುದ್ಧ ಕುಂಬಳೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಲಿದೆ. ಪೇಟೆಗೆ ಬರುವವರಿಗೆ ಈಗ ಶೌಚಾಲಯ ಅಥವಾ ಕುಡಿಯುವ ನೀರು ಇಲ್ಲ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಬಸ್ ಶೆಲ್ಟರ್‍ಗಳು ಸೋರುತ್ತಿರುವುದು ಸಹ ಪ್ರಮುಖ ಪ್ರತಿಭಟನೆಗಳಿಗೆ ಕಾರಣವಾಗಿದೆ. ಜುಲೈ 6 ರ ಬೆಳಿಗ್ಗೆಯಿಂದ, ನಗರದಲ್ಲಿ 500 ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಳಿಗ್ಗೆ 10 ಗಂಟೆಗೆ ಪಂಚಾಯತಿ ಕಚೇರಿಗೆ ಮೆರವಣಿಗೆ ನಡೆಸಲಿದ್ದಾರೆ.
ಪ್ರಬಲ ಮುಷ್ಕರದ ಕಡೆಗೆ:
ಅಕ್ರಮ ಪಾರ್ಕಿಂಗ್ ಮತ್ತು ಆಟೋರಿಕ್ಷಾ ನಿಲ್ದಾಣಗಳು ವ್ಯಾಪಾರಿಗಳಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡುತ್ತಿವೆ. ಈ ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುಂಬಳೆಯ ಸೋಮವಾರದ ಮುಷ್ಕರವು ಕೇವಲ ಎಚ್ಚರಿಕೆಯಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಿದ್ಧರಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಮುಷ್ಕರ ಕಾರ್ಯಕ್ರಮಗಳತ್ತ ಸಾಗುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮತ್ತು ವ್ಯಾಪಾರಿ ಯುವ ವಿಭಾಗ ಸ್ಪಷ್ಟಪಡಿಸಿದೆ.
ಅಧಿಕೃತರು ಮಾಡುತ್ತಿರುವುದೇನು:
ಕಾಲಾಕಾಲಕ್ಕೆ ಚುನಾಯಿತರಾಗಿ ಬರುವ ರಾಜಕೀಯ ಪ್ರತಿನಿಧಿಗಳು ಕೇವಲ ಭರವಸೆಗಳ ಮೂಲಕ ಜನರ ಬಾಯಿ ಮುಚ್ಚಿಸುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಲಾಭದಾಯಕವಾದ ರಸ್ತೆಗೆ ತೇಪೆ, ಕಂಬಗಳಿಗೆ ವಿದ್ಯುತ್ ಬಲ್ಭ್ ಅಳವಡಿಕೆಯಂತಹ ದಶಕಗಳ ಹಿಂದಿನ ಯೋಜನೆಗಳಲ್ಲೇ ಕಾಲ ಕಳೆಯುವ ಆಡಳಿತ ಪಕ್ಷಗಳು, ಶಕ್ತಿಹೀನ ಪ್ರತಿಪಕ್ಷಗಳ ಮಧ್ಯೆ ಜನರು ಹೈರಾಣರಾಗಿದ್ದಾರೆ,



