ಪಾರ್ವತಿಪುರ: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಏಳನೇ ತರಗತಿ ಬಾಲಕಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಕಲ್ಲು ಮುಳ್ಳುಗಳಿಂದ ಕೂಡಿದ್ದ ರಸ್ತೆಯಲ್ಲಿ ಸುಮಾರು 6 ಕಿಲೋಮೀಟರ್ ನಡೆದು ಆಸ್ಪತ್ರೆಗೆ ದಾಖಲಿಸಿದ ಬುಡಕಟ್ಟು ಶಾಲೆಯ ಶಿಕ್ಷಕಿ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಆಂಧ್ರಪ್ರದೇಶದ ಪಾರ್ವತಿಪುರ ಮಣ್ಯಂ ಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿರುವ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ವ್ಯಾಸಂಗ ಮಾಡುತ್ತಿರುವ 7ನೇ ತರಗತಿ ವಿದ್ಯಾರ್ಥಿನಿ ಭುವನೇಶ್ವರಿ ಹಠಾತ್ತನೆ ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಗೆ ಸಾಗಿಸಲು ಯಾವುದೇ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೇ ಶಾಲೆಯ ಸಿಬ್ಬಂದಿ ಕಂಗಲಾಗಿದ್ದರು. ಆಗ ಮುಂದೆ ಬಂದ ಶಿಕ್ಷಕಿ ಹೇಮನಿ, ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು ಆಸ್ಪತ್ರೆ ಕಡೆ ಹೆಜ್ಜೆ ಹಾಕಿದ್ದಾರೆ.
ಬಾಲಕಿಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ತುರ್ತಾಗಿ ಚಿಕಿತ್ಸೆ ನೀಡುವ ಅಗತ್ಯವಿತ್ತು. ಅದನ್ನು ಮನಗಂಡ ಶಿಕ್ಷಕಿ ಹೇಮನಿ, ಹದಗೆಟ್ಟಿದ್ದ ಆ ರಸ್ತೆಯಲ್ಲಿ ಬಿರುಸಿನ ಹೆಜ್ಜೆ ಹಾಕಿ ಜಿಲ್ಲಾ ಆಸ್ಪತ್ರೆ ತಲುಪಿದ್ದಾರೆ. ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ, ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಸದ್ಯ ಬಾಲಕಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯಾವುದೇ ಹಿಂಜರಿಕೆಯಿಲ್ಲದೇ ಒಂದು ಪ್ರಾಣವನ್ನು ರಕ್ಷಿಸಲು ಹೇಮನಿ ಅವರು ಆಯ್ದುಕೊಂಡ ದಾರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಒಂದು ಅಮೂಲ್ಯ ಜೀವ ಉಳಿಸಿದ್ದಕ್ಕಾಗಿ ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಇಲಾಖೆ ಹೇಮನಿ ಅವರನ್ನು ಕರೆದು ಸನ್ಮಾನಿಸಿದೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಘಟನೆಯು ಒಂದು ಕಡೆ ಶಿಕ್ಷಕಿಯ ನಿಸ್ವಾರ್ಥ ಸೇವೆ ಮತ್ತು ಮಾನವೀಯ ಗುಣಗಳನ್ನು ಜಗತ್ತಿಗೆ ಪರಿಚಯಿಸಿದರೆ, ಮತ್ತೊಂದು ಕಡೆ ದೂರದ ಬುಡಕಟ್ಟು ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಕೊರತೆಯನ್ನೂ ಎತ್ತಿ ತೋರಿಸಿದೆ.

