ಕೊಲಂಬೊ: ಶ್ರೀಲಂಕಾದ ನೆಗೊಂಬೊದಲ್ಲಿರುವ ಜೈಲಿನಲ್ಲಿ ಹಿಂಸಾತ್ಮಕ ಗಲಭೆ ನಡೆದಿದ್ದು, ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಒಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಪೈಕಿ 7 ಮಂದಿ ಜೈಲು ಅಧಿಕಾರಿಗಳು ಹಾಗೂ 19 ಕೈದಿಗಳು ಸೇರಿದ್ದಾರೆ.
ಘಟನೆಯಲ್ಲಿ 77 ಕ್ಕೂ ಹೆಚ್ಚು ಜನ (23 ಅಧಿಕಾರಿಗಳು, 54 ಕೈದಿಗಳು) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೈದಿಗಳ ಎರಡು ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿತ್ತು. ಸೋಮವಾರ ಮತ್ತೆ ಗಲಭೆ ನಡೆದಿದ್ದು ಕೈದಿಗಳು ಜೈಲಿನ ಸಿಬ್ಬಂದಿಯ ಬಂದೂಕುಗಳನ್ನು ಕಸಿದುಕೊಂಡು ಹಿಂಸಾಚಾರದಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ 'ಹಿರು' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾದಕವಸ್ತು ಕಳ್ಳಸಾಗಣೆ ನಡೆಸುತ್ತಿದ್ದ ಗುಂಪು ಹಾಗೂ ಇದನ್ನು ವಿರೋಧಿಸುತ್ತಿದ್ದ ಮತ್ತೊಂದು ಗುಂಪಿನ ನಡುವೆ ಈ ಗಲಭೆ ನಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಆದರೆ ಈ ಜೈಲಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ಇರಿಸಿರುವುದು ಘಟನೆಗೆ ಮೂಲ ಕಾರಣ ಎಂದು ಕೈದಿಗಳ ಕಲ್ಯಾಣ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಜೈಲಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಹಿಂಸಾಚಾರದಲ್ಲಿ ಭಾಗಿಯಾಗಿದ್ದ 734 ಕೈದಿಗಳನ್ನು ತಕ್ಷಣವೇ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಪ್ರತ್ಯೇಕ ಪೊಲೀಸ್ ತನಿಖೆಯೂ ನಡೆಯುತ್ತಿದೆ ಎಂದು ಕಾರಾಗೃಹ ಇಲಾಖೆ ವಕ್ತಾರ ಎ.ಸಿ ಗಜನಾಯಕೆ ತಿಳಿಸಿದ್ದಾರೆ.
650 ಸಾಮರ್ಥ್ಯದ ಜೈಲಿನಲ್ಲಿ 2,600 ಕೈದಿಗಳು
ಕೈದಿಗಳ ಹಕ್ಕುಗಳ ಸಮಿತಿಯ ಅಧ್ಯಕ್ಷ ಸೇನಕ ಪೆರೇರಾ, ಜೈಲುಗಳ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನೆಗೊಂಬೊ ಜೈಲಿನ ಒಟ್ಟು ಸಾಮರ್ಥ್ಯ ಕೇವಲ 650 ಕೈದಿಗಳು. ಆದರೆ ಘಟನೆ ನಡೆದಾಗ ಅಲ್ಲಿ ಬರೋಬ್ಬರಿ 2,600ಕ್ಕೂ ಹೆಚ್ಚು ಕೈದಿಗಳಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ ಜೈಲಿನಲ್ಲಿ ಡೆಂಗಿ ಜ್ವರ ತೀವ್ರವಾಗಿ ಹರಡುತ್ತಿದ್ದರೂ ಯಾವುದೇ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಿರಲಿಲ್ಲ. ಇದರಿಂದ ಕೈದಿಗಳು ಮೊದಲೇ ಆಕ್ರೋಶಗೊಂಡಿದ್ದರು ಎಂದೂ ಪೆರೇರಾ ಹೇಳಿದ್ದಾರೆ.

