ಭಾರತದಲ್ಲಿ ಚಹಾ ಪ್ರಿಯರಿಗೇನೂ ಕಡಿಮೆ ಇಲ್ಲ. ಬೇಸಿಗೆ, ಮಳೆ, ಚಳಿ ಏನೇ ಇರಲಿ ಒಂದು ಕಪ್ ಚಹಾ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎನ್ನುವವರೇ ಹೆಚ್ಚು.
1 ಕೆ.ಜಿ ಸಾಮಾನ್ಯ ಚಹಾ ಪುಡಿಗೆ ಹೆಚ್ಚೆಂದರೆ ಭಾರತದಲ್ಲಿ ₹200 ಇರಬಹುದು. ಊಹಿಸಿಕೊಳ್ಳಿ, ಕೇವಲ 20 ಗ್ರಾಂ ಚಹಾ ಪುಡಿಗೆ ₹1 ಲಕ್ಷ ಬೆಲೆ ಇದ್ದರೆ...
ಸಾಧ್ಯವೇ ಇಲ್ಲ ಎಂದುಕೊಳ್ಳಬಹುದು. ಆದರೆ ಚೀನಾದಲ್ಲಿ ಬೆಳೆಯುವ ಅಪರೂಪದ 'ಡಾ ಹಾಂಗ್ ಪಾವೊ' ಎನ್ನುವ ಚಹಾ ಪುಡಿಗೆ ಇರುವ ಬೆಲೆಯಿದು. ಇದನ್ನು ಜಗತ್ತಿನ ದುಬಾರಿ ಚಹಾ ಎಂದೇ ಕರೆಯಲಾಗುತ್ತದೆ.
ಕೆಜಿಗೆ ₹9 ಕೋಟಿ! ಜಗತ್ತಿನ ಅತ್ಯಂತ ದುಬಾರಿ ಚಹಾ 'ಡಾ ಹಾಂಗ್ ಪಾವೊ'
ಚೀನಾದ ಅಪರೂಪದ 'ಡಾ ಹಾಂಗ್ ಪಾವೊ' ಚಹಾವು ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ಅತೀ ಕಡಿಮೆ ಲಭ್ಯತೆಯ ಕಾರಣದಿಂದಾಗಿ ಕೆಜಿಗೆ 9 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯ ಹೊಂದಿದೆ.
ಡಾ ಹಾಂಗ್ ಪಾವೊ ಚಹಾದ ವಿಶೇಷತೆ ಏನು?
ಇದು ಚೀನಾದ ವೂಯಿ ಬೆಟ್ಟಗಳಲ್ಲಿ ಬೆಳೆಯುವ ಅತ್ಯಂತ ಅಪರೂಪದ ಚಹಾ ತಳಿಯಾಗಿದ್ದು, ತನ್ನ ವಿಶಿಷ್ಟ ಸ್ವಾದ ಮತ್ತು ರಾಜಮನೆತನದ ಇತಿಹಾಸದಿಂದಾಗಿ ಜಗತ್ತಿನಲ್ಲೇ ಅತಿ ದುಬಾರಿ ಚಹಾ ಎಂದು ಗುರುತಿಸಲ್ಪಟ್ಟಿದೆ.
ಈ ಚಹಾದ ಉತ್ಪಾದನೆಯ ಮೇಲೆ ನಿಷೇಧವೇಕೆ?
ಈ ತಳಿಯ ಅಸಲಿ ತಾಯಿ ಗಿಡಗಳು ಕೇವಲ ಆರು ಮಾತ್ರ ಉಳಿದಿರುವುದರಿಂದ, ಈ ಅಮೂಲ್ಯ ಸಂಪತ್ತನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಉದ್ದೇಶದಿಂದ 2006ರಿಂದ ವಾಣಿಜ್ಯಕವಾಗಿ ಬೆಳೆಯುವುದನ್ನು ಚೀನಾ ಸರ್ಕಾರ ನಿಷೇಧಿಸಿದೆ.
ಈ ಚಹಾದ ಬೆಲೆ ಎಷ್ಟು ದುಬಾರಿಯಾಗಿದೆ?
ವರದಿಗಳ ಪ್ರಕಾರ, ಇದರ ಬೆಲೆ ಪ್ರತಿ ಕೆಜಿಗೆ 9 ಕೋಟಿ ರೂಪಾಯಿಗೂ ಹೆಚ್ಚಿದೆ. ಹರಾಜಿನಲ್ಲಿ 20 ಗ್ರಾಂ ಅಸಲಿ ಚಹಾವು ಸುಮಾರು 1.23 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು ಮೌಲ್ಯಯುತವಾಗಿದೆ.
ಈ ಚಹಾಗೆ 'ಡಾ ಹಾಂಗ್ ಪಾವೊ' ಎಂದು ಹೆಸರು ಬಂದಿದ್ದೇಕೆ?
ಪೌರಾಣಿಕ ಕಥೆಯ ಪ್ರಕಾರ, ಚಕ್ರವರ್ತಿಯನ್ನು ಗುಣಪಡಿಸಿದ ಸನ್ಯಾಸಿಯ ಉಪಕಾರಕ್ಕೆ ಪ್ರತಿಯಾಗಿ, ಚಕ್ರವರ್ತಿ ತನ್ನ ಕೆಂಪು ಉಡುಪನ್ನು ಆ ಗಿಡಗಳಿಗೆ ಹೊದಿಸಿದ್ದರಿಂದ ಇದನ್ನು 'ದೊಡ್ಡ ಕೆಂಪು ಉಡುಪು' (ಡಾ ಹಾಂಗ್ ಪಾವೊ) ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಸಿಗುವ ವಿಶೇಷ ಚಹಾದ ಬಗ್ಗೆ ಮಾಹಿತಿ ಇದೆಯೇ?
ಹೌದು, ಭಾರತದ ಕೇರಳದ ಮುನ್ನಾರ್‌ನಲ್ಲಿ ಬಿಳಿ ಚಹಾ (Whiಣe ಖಿeಚಿ) ಬೆಳೆಯಲಾಗುತ್ತದೆ. ಇದು ಆರೋಗ್ಯಕರ ಆಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ 100 ಗ್ರಾಂಗೆ ಸುಮಾರು 2 ಸಾವಿರ ರೂಪಾಯಿವರೆಗೆ ಬೆಲೆಯಿದೆ.
ಬೀಜಿಂಗ್‌ನ ವೂಯಿ ಬೆಟ್ಟಗಳಲ್ಲಿರುವ ಈ ಚಹಾ ಪುಡಿ ತನ್ನ ಸ್ವಾದದಿಂದ ಮಾತ್ರವಲ್ಲ, ಅಪರೂಪವಾಗಿರುವುದರಿಂದಲೂ ಬೆಲೆ ಹೆಚ್ಚಿಸಿಕೊಂಡಿದೆ. ಶತಮಾನಗಳ ಇತಿಹಾಸ ಮತ್ತು ರಾಜಮನೆತನದ ಪರಂಪರೆಯ ಕಾರಣಕ್ಕೆ ಚಹಾ ಜಗತ್ತಿನ ಅತ್ಯಂತ ಶ್ರೇಷ್ಠ ಸಂಪತ್ತು ಎಂದು ಗುರುತಿಸಲ್ಪಟ್ಟಿದೆ.
ಚೀನಾದಲ್ಲಿ ಈಗ ಈ ಚಹಾ ಬೆಳೆಯಲು ನಿಷೇಧ
ಅಚ್ಚರಿಯ ವಿಚಾರವೆಂದರೆ ಚೀನಾದ ಈ ಅಪರೂಪದ ಚಹಾ ಎಲೆಗಳನ್ನು ಬೆಳೆಯುವುದನ್ನು ಈಗ ನಿಷೇಧಿಸಲಾಗಿದೆ. 2006ರಲ್ಲಿ ಚೀನಾ ಸರ್ಕಾರ ಈ ಡಾ ಹಾಂಗ್ ಪಾವೊ ತಳಿಯ ಚಹಾ ಬೆಳೆಯನ್ನು ವಾಣಿಜ್ಯಕವಾಗಿ ಬೆಳೆಯುವುದಕ್ಕೆ ನಿಷೇಧ ಹೇರಿತು. ಅದಕ್ಕೆ ಕಾರಣ ಈ ತಳಿಯ ಅಸಲಿ ಗಿಡ ಅಂದರೆ ತಾಯಿ ಗಿಡ ಆರು ಮಾತ್ರ ಉಳಿದಿರುವುದು. ಮುಂದಿನ ತಲೆಮಾರಿಗೂ ಇದರ ಪರಿಚಯ ಇರಬೇಕು ಎನ್ನುವ ಕಾರಣಕ್ಕೆ ಸಂರಕ್ಷಿಸಿಡಲಾಗಿದೆ. ಅಲ್ಲದೆ ಇದಕ್ಕೆ 2006ರಲ್ಲಿ ಸುಮಾರು ₹142 ಕೋಟಿಯ ವಿಮೆಯನ್ನೂ ಮಾಡಿಸಿತ್ತು.
ಈ ಪ್ರಾಚೀನ ತಳಿಯನ್ನು ಈಗ ಚೀನಾದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಸಂರಕ್ಷಿಸಲಾಗಿದೆ. 'ತಾಯಿ ಮರ'ಗಳಿಂದ ಪಡೆದ ಕೊನೆಯ ಫಸಲನ್ನು ಬೀಜಿಂಗ್‌ನ ಪ್ಯಾಲೇಸ್ ಮ್ಯೂಸಿಯಂನಲ್ಲಿ ಇಡಲಾಗಿದೆ.
ಈಗ ಲಭ್ಯವಿರುವ 'ಡಾ ಹಾಂಗ್ ಪಾವೊ' ಚಹಾ ಪುಡಿಯನ್ನು ಮೂಲ ತಾಯಿ ಮರಗಳ ಕೊಂಬೆಗಳಿಂದ ಕಸಿ ಮಾಡಿ ಬೆಳೆಸಿದ ಹೊಸ ಗಿಡಗಳ ಎಲೆಗಳಿಂದ ತಯಾರು ಮಾಡಲಾಗಿದೆ. ಅದೇ ವೂಯಿ ಬೆಟ್ಟದ ಇತರ ಉತ್ತಮ ಗುಣಮಟ್ಟದ ಟೀ ಎಲೆಗಳನ್ನು ಮಿಶ್ರಣ ಮಾಡಿ ಚಹಾ ಪುಡಿ ತಯಾರಿಸಲಾಗುತ್ತದೆ.
1 ಕೆಜಿಗೆ ಈಗ ₹9 ಕೋಟಿ
ತಾಯಿ ಗಿಡಗಳು ಆರು ಮಾತ್ರ ಇರುವುದರಿಂದ ಅವುಗಳಿಂದ ಹಿಂದೆ ಉತ್ಪಾದಿಸಲಾಗುತ್ತಿದ್ದ ಚಹಾದ ಪ್ರಮಾಣ ಅತ್ಯಂತ ಸೀಮಿತವಾಗಿತ್ತು. ರಾಷ್ಟ್ರೀಯ ಸಂಪತ್ತಿನಂತೆ ಸಂರಕ್ಷಿಸಿರುವ ಈ ಅಸಲಿ ಚಹಾದ ಬೆಲೆ ಈಗ ಪ್ರತಿ ಕೆಜಿಗೆ ₹9 ಕೋಟಿಗೂ ಹೆಚ್ಚಿದೆ ಎನ್ನುತ್ತವೆ ವರದಿಗಳು.
ಇದುವರೆಗೂ ನಡೆದ ಅತ್ಯಂತ ಪ್ರಸಿದ್ಧ ಚಹಾ ಹರಾಜುಗಳಲ್ಲಿ, 20 ಗ್ರಾಂ ಅಸಲಿ 'ಡಾ ಹಾಂಗ್ ಪಾವೊ' ಚಹಾ ಸುಮಾರು ₹1.23 ಲಕ್ಷಕ್ಕೆ ಮಾರಾಟವಾಗಿದೆ. ಈ ಅಸಲಿ ಚಹಾದ ಒಂದು ಗ್ರಾಂ ಬೆಲೆ ₹1.2 ಲಕ್ಷಕ್ಕೂ ಹೆಚ್ಚಿದೆ.
ತೂಕದ ಆಧಾರದ ಮೇಲೆ ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು ಮೌಲ್ಯಯುತವಾಗಿದೆ. ಇದರ ಅಸಲಿ ಎಲೆಗಳಿಂದ ತಯಾರಿಸಿದ ಒಂದು ಪಾಟ್ ಚಹಾದ ಬೆಲೆ ಸುಮಾರು ₹8.5 ಲಕ್ಷ.
ಚೀನಾದಲ್ಲಿರುವ ಕಥೆಗಳ ಪ್ರಕಾರ...
ಚೀನೀ ಜಾನಪದ ಕಥೆಯ ಪ್ರಕಾರ, ಒಬ್ಬ ಯುವ ವಿದ್ವಾಂಸ, ವುಯಿ ಪರ್ವತಗಳ ಮೂಲಕ ಬೀಜಿಂಗ್‌ಗೆ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರವಾಗಿ ಅಸ್ವಸ್ಥಗೊಂಡನು. ಆಗ ಹತ್ತಿರದ ದೇವಾಲಯದಲ್ಲಿದ್ದ ಸನ್ಯಾಸಿ ಬಂಡೆಗಳ ಮೇಲೆ ಬೆಳೆಯುತ್ತಿದ್ದ ವಿಶೇಷ ಚಹಾ ಗಿಡದ ಎಲೆಗಳನ್ನು ಬಳಸಿ ಚಹಾವನ್ನು ತಯಾರಿಸಿಕೊಟ್ಟರು. ಇದರಿಂದ ಆ ವಿದ್ವಾಂಸ ಚೇತರಿಸಿಕೊಂಡಿದ್ದ.
ಅಲ್ಲಿಯ ಚಕ್ರವರ್ತಿ ಅಸ್ವಸ್ಥರಾದಾಗ, ಆ ವಿದ್ವಾಂಸ ಅದೇ ರೀತಿಯ ಚಹಾವನ್ನು ತಯಾರಿಸಿಕೊಟ್ಟಿದ್ದನು. ಇದಕ್ಕೆ ಪ್ರತಿಯಾಗಿ ಚಕ್ರವರ್ತಿ ವಿದ್ವಾಂಸನಿಗೆ ಭವ್ಯವಾದ ಕೆಂಪು ಬಣ್ಣದ ವಿಶೇಷ ಉಡುಪೊಂದನ್ನು ಉಡುಗೊರೆಯಾಗಿ ನೀಡಿದನು. ಪ್ರಾಣವನ್ನೂ ಉಳಿಸಿದ ಆ ಚಹಾವನ್ನು ಗೌರವಿಸುವ ಉದ್ದೇಶದಿಂದ, ವಿದ್ವಾಂಸನು ಪರ್ವತಗಳಿಗೆ ಹಿಂತಿರುಗಿ ಚಕ್ರವರ್ತಿಯ ಉಡುಪನ್ನು ಚಹಾ ಗಿಡಗಳ ಮೇಲೆ ಹೊದಿಸಿದನು. ಅಂದಿನಿಂದ ಆ ಚಹಾವನ್ನು 'ಡಾ ಹಾಂಗ್ ಪಾವೊ' ಅಥವಾ 'ದೊಡ್ಡ ಕೆಂಪು ಉಡುಪು' ಎಂದು ಕರೆಯಲಾಗುತ್ತದೆ.
ಭಾರತದ ಮುನ್ನಾರ್‌ನಲ್ಲಿದೆ ಬಿಳಿ ಚಹಾ
ಭಾರತದಲ್ಲೂ ಚಹಾಕ್ಕೆ ವಿಶೇಷ ಮನ್ನಣೆ ನೀಡಲಾಗುತ್ತದೆ. ಕೇರಳದ ಮುನ್ನಾರ್‌ನಲ್ಲಿ ಬಿಳಿ ಚಹಾ ಎಲೆಗಳನ್ನು ಬೆಳೆಯಲಾಗುತ್ತದೆ. ಈ ಎಲೆಗಳು ಆಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಿಶೇಷ ಗುಣದಿಂದಲೇ ಈ ಚಹಾ ಪುಡಿಗೆ ವಿಶ್ವದಾದ್ಯಂತ ಬೇಡಿಕೆಯಿದೆ.
ಈ ಚಹಾ ಕೂಡ ದುಬಾರಿಯಾಗಿದ್ದು, 100 ಗ್ರಾಂ ಬೆಲೆ ₹2 ಸಾವಿರದವರೆಗೂ ಇದೆ.

