ಟೆಹರಾನ್: ಹೊರ್ಮುಜ್ ಜಲಸಂಧಿಯಲ್ಲಿ ಸ್ಥಗಿತಗೊಂಡಿದ್ದ ಹಡುಗಗಳ ಸಂಚಾರ ಸೋಮವಾರ ಮತ್ತೆ ಆರಂಭವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ಸುಮಾರು 40 ಹಡಗುಗಳು ಈ ಜಲಮಾರ್ಗದ ಮೂಲಕ ಸಂಚರಿಸಿವೆ. ಭಾನುವಾರ 24 ಮತ್ತು ಶನಿವಾರ 39 ಹಡಗುಗಳು ಸಂಚರಿಸಿದ್ದವು ಎಂದು ಕಡಲ ದತ್ತಾಂಶ ನಿರ್ವಹಣಾ ಸಂಸ್ಥೆ 'ಕೆಪ್ಲರ್' ತಿಳಿಸಿದೆ.
ತೈಲ ಮತ್ತು ಅನಿಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯ ಮೂಲಕ ಕಳೆದ ಬುಧವಾರ 76 ಹಡಗುಗಳು ಸಂಚರಿಸಿದ್ದು, ಇದು ಮಾರ್ಚ್ 1ರ ನಂತರ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ.
ಫೆಬ್ರುವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದವು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳಿಗೆ ಕಚ್ಚಾತೈಲ, ಎಲ್‌ಪಿಜಿ, ನೈಸರ್ಗಿಕ ಅನಿಲವನ್ನು ಸಾಗಿಸುತ್ತಿದ್ದ ಎಷ್ಟೋ ಹಡಗುಗಳು ಸಮುದ್ರ ಮಾರ್ಗದಲ್ಲಿ ಸಿಲುಕಿಕೊಂಡಿದ್ದವು.
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಮುಂದುವರಿದಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳಿವೆ ಎಂದು ವರದಿಯಾಗಿದೆ.

