ವಾಷಿಂಗ್ಟನ್: ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವದ ಹಕ್ಕನ್ನು ನಿರ್ಬಂಧಿಸಲು ಹೊರಟಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊಂಡುತನದ ಯತ್ನವನ್ನು ಅಲ್ಲಿನ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು, ಜನ್ಮದತ್ತ ಪೌರತ್ವದ ಹಕ್ಕನ್ನು ಎತ್ತಿಹಿಡಿದಿದೆ.
6-3ರ ಬಹುಮತದ ತೀರ್ಪನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪ್ರಕಟಿಸಿದ್ದಾರೆ.
ಫೆಬ್ರುವರಿಯಲ್ಲಿ ಜಾಗತಿಕವಾಗಿ ವಿವಿಧ ದೇಶಗಳ ಮೇಲೆ ಮಿತಿ ಮೀರಿದ ಸುಂಕ ವಿಧಿಸಿದ್ದ ಟ್ರಂಪ್ ನಿರ್ಣಯವನ್ನೂ ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು. ಹೀಗಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಈ ವರ್ಷ ಟ್ರಂಪ್‌ಗೆ ಆದ ಎರಡನೇ ಮುಖಭಂಗ ಇದಾಗಿದೆ.
ವಲಸಿಗ ಪೋಷಕರು ಅಮೆರಿಕದಲ್ಲಿದ್ದರೂ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿಗಳಾಗಿದ್ದರೂ(ಗ್ರೀನ್ ಕಾರ್ಡ್ ಹೊಂದಿರುವವರು) ಅಮೆರಿಕದಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಪೌರತ್ವವನ್ನು ಪರಿಗಣಿಸದಂತೆ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಕಾರ್ಯಕಾರಿ ಆದೇಶವನ್ನು ರದ್ದುಪಡಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪಿನಿಂದ ವಲಸಿಗರು ನಿಟ್ಟುಸಿರು ಬಿಡುವಂತಾಗಿದೆ.
ಪೋಷಕರಲ್ಲಿ ಯಾರೊಬ್ಬರೂ ಅಮೆರಿಕ ಪ್ರಜೆಯಾಗಿಲ್ಲದಿದ್ದರೆ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಎಂದೂ ಕರೆಯಲ್ಪಡುವ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿಲ್ಲದಿದ್ದರೆ, ಅಮೆರಿಕದಲ್ಲಿ ಜನಿಸಿದ ಮಕ್ಕಳ ಪೌರತ್ವವನ್ನು ಗುರುತಿಸಬಾರದು ಎಂದು ಅಮೆರಿಕದ ಏಜೆನ್ಸಿಗಳಿಗೆ ನಿರ್ದೇಶನ ನೀಡುವ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವನ್ನು ತಡೆಹಿಡಿದ ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳು ಎತ್ತಿಹಿಡಿದಿದ್ದಾರೆ.
ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಜನದತ್ತವಾಗಿ ಪೌರತ್ವ ಒದಗಿಸುವ ಸಂವಿಧಾನದ 14ನೇ ತಿದ್ದುಪಡಿಯನ್ನು ಟ್ರಂಪ್ ಆದೇಶವು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿತ್ತು.
ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರಕ್ಕೇರಿದ ಬಳಿಕ ಟ್ರಂಪ್ ದೇಶೀಯ ಮತ್ತು ವಿದೇಶಿ ನೀತಿಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಕುರಿತಂತೆ ಪದೇ ಪದೇ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೇರಿದ ಮೊದಲ ದಿನವೇ ಕಾನೂನುಬದ್ಧ ಮತ್ತು ಅಕ್ರಮ ವಲಸಿಗರ ಕುರಿತಂತೆ ಆದೇಶ ಹೊರಡಿಸಿದ್ದರು. ರಿಪಬ್ಲಿಕನ್ ನಾಯಕ ವಲಸಿಗರ ಬಗ್ಗೆ ಧಾರ್ಮಿಕ ಮತ್ತು ವರ್ಣ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

