ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಚಂದ್ರಿಮಾ ಅವರಿಗೆ ಪಕ್ಷದ ಉನ್ನತ ಜವಾಬ್ದಾರಿ ನೀಡಲಾಗಿತ್ತು.
ಪಕ್ಷದಲ್ಲಿ ತಾನು ಹೊಂದಿದ್ದ ಇತರೆ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿರುವುದಾಗಿ ಅವರು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿದ್ದ ಚಂದ್ರಿಮಾ, ಹಣಕಾಸು ಮತ್ತು ಆರೋಗ್ಯ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು.
ಪಕ್ಷದ ಮಹಿಳಾ ಘಟಕದದ ನೇತೃತ್ವವನ್ನೂ ವಹಿಸಿದ್ದ ಪ್ರಮುಖ ನಾಯಕಿಯಾದ ಚಂದ್ರಿಮಾ ಭಟ್ಟಾಚಾರ್ಯ ಅವರು, ವಿವಿಧ ಬ್ಯಾಂಕ್‌ಗಳಲ್ಲಿರುವ ಪಕ್ಷದ ಖಾತೆಗಳಿಗೆ ಸಂಬಂಧಿಸಿದ ಅಧಿಕೃತ ಸಹಿದಾರರ ಜವಾಬ್ದಾರಿಯಿಂದಲೂ ಹಿಂದೆ ಸರಿದಿದ್ದಾರೆ.
ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಹಿರಿಯ ನಾಯಕ ಸುಬ್ರತಾ ಬಕ್ಷಿ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಮೂರು ಬಾರಿ ಶಾಸಕಿಯಾಗಿರುವ ಚಂದ್ರಿಮಾ, 2026ರ ವಿಧಾನಸಭಾ ಚುನಾವಣೆಯಲ್ಲಿ ದಮ್ ದಮ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೌರವ್ ಸಿಕ್ದಾರ್ ಎದುರು ಪರಾಭವಗೊಂಡಿದ್ದರು.

