ಇಸ್ಲಾಮಾಬಾದ್: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್, 'ನಮ್ಮ ಪಾಲಿನ ನೀರಿನ ಮೇಲೆ ಯಾರಾದರೂ ಕೈ ಹಾಕಿದರೆ, ಆ ಕೈಗಳನ್ನು ಕತ್ತರಿಸುತ್ತೇವೆ' ಎಂದಿದ್ದಾರೆ.
ಕಳೆದ ವರ್ಷ ನಡೆದ ಪಹಲ್ಗಾಮ್ ದಾಳಿಯ ನಂತರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ತಡೆ ನೀಡಲು ಭಾರತ ನಿರ್ಧರಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲಿಕ್, ಪಾಕಿಸ್ತಾನದ ನೀರಿನ ಪಾಲನ್ನು ಭಾರತ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
'ನೆರೆಯ ದೇಶದ ಪ್ರಧಾನಮಂತ್ರಿಯೊಬ್ಬರ ನಿಯಂತ್ರಣದಲ್ಲಿ ಒಂದು ನಳ್ಳಿಯಿದೆ (ಟ್ಯಾಪ್). ಅವರು ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸದೇ ಪರೋಕ್ಷ ದಾಳಿ ನಡೆಸಿದ್ದಾರೆ.
'ಪಾಕಿಸ್ತಾನದ ಶೇ 40ರಿಂದ 50ರಷ್ಟು ಜನಸಂಖ್ಯೆಯು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದೆ. ಬೇರೊಬ್ಬರು ಈ ದೇಶದ ಆಹಾರ ಭದ್ರತೆ, ಉದ್ಯೋಗ ಮತ್ತು ಆರ್ಥಿಕತೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ' ಎಂದು ಅವರು ಕಿಡಿಕಾರಿದ್ದಾರೆ.
'ನಮ್ಮ ಪಾಲಿನ ನೀರನ್ನು ಕಸಿದುಕೊಳ್ಳಲು ಪ್ರಯತ್ನಿಸುವ ಯಾರೇ ಆಗಲಿ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ಕೇವಲ ಘೋಷಣೆಯಲ್ಲಿ, ಬದಲಿಗೆ ನಮ್ಮ ನೀರಿನ ಪಾಲಿನ ಮೇಲೆ ಯಾರಾದರೂ ಕೈ ಹಾಕಿದರೆ ಆ ಕೈಗಳನ್ನು ಕತ್ತರಿಸುತ್ತೇವೆ' ಎಂದಿದ್ದಾರೆ.
'ನದಿಯ ಮೇಲ್ಭಾಗದಲ್ಲಿರುವ ಪ್ರತಿಯೊಂದು ದೇಶಕ್ಕೂ ಕೆಳಭಾಗದಲ್ಲಿರುವ ದೇಶಕ್ಕೆ ಹರಿಯುವ ನೀರನ್ನು ತಡೆಯುವ ಹಕ್ಕಿದೆಯೇ?. ಪಾಕಿಸ್ತಾನ ಮತ್ತು ಭಾರತದ ನಡುವೆ ಒಪ್ಪಂದವಿದೆ. ಹಾಗಿರುವಾಗ ಇಲ್ಲಿಗೆ ನೀರು ಹರಿಯದಂತೆ ಹೇಗೆ ತಡೆಯಲು ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
ನಂತರ ಮಾತನಾಡಿದ ವಾರ್ತಾ ಸಚಿವ ಅತ್ತಾವುಲ್ಲಾ ತರಾರ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಕಾನೂನುಬದ್ಧವಾಗಿದ್ದು, ಇದನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಲು, ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ.
ಈ ಹಿಂದೆ ಇದೇ ವಿಷಯದ ಬಗ್ಗೆ ಮಾತನಾಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಒಪ್ಪಂದ ರದ್ದುಪಡಿಸಿದರೆ ಭಾರತದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು.

