HEALTH TIPS

ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರಿಗೇ ಅನುವಾದದ ಹೊಣೆ:ಪಾವಿತ್ರ್ಯಕ್ಕೆ ಧಕ್ಕೆ; ವರದಿ

ನವದೆಹಲಿ: ನೀಟ್‌-ಯುಜಿ 2026ರಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಅನುವಾದಿಸುವ ಪ್ರಕ್ರಿಯೆಯಲ್ಲಿ ಒಂದೇ ಗುಂಪಿನ ವ್ಯಕ್ತಿಗಳು ಭಾಗಿಯಾಗಿದ್ದು, ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಲು ಪ್ರಮುಖ ಕಾರಣಗಳಲ್ಲಿ ಒಂದು ಎಂಬುದು ಗೊತ್ತಾಗಿದೆ.

ಈ ಲೋಪದ ಬಗ್ಗೆ ಸಿಬಿಐ ಈಗಾಗಲೇ ಅನೌಪಚಾರಿಕವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದೆ. 


ಅಲ್ಲದೆ ಈ ಅಂಶವನ್ನು ತನ್ನ ಅಧಿಕೃತ ಶಿಫಾರಿಸಿನಲ್ಲೂ ಉಲ್ಲೇಖಿಸುವ ಸಾಧ್ಯತೆಯಿದೆ ಎಂದು ಸಿಬಿಐನ ಉನ್ನತ ಮೂಲಗಳು ತಿಳಿಸಿವೆ.

ಮಾರಾಠಿಗೆ ಅನುವಾದಿಸುವ ಹೊಣೆಯೂ ಇತ್ತು:

'2026ರ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಮತ್ತು ಮರಾಠಿ ಭಾಷೆಗೆ ಅನುವಾದಿಸುವ ಜವಾಬ್ದಾರಿ ಎನ್‌ಟಿಎ ಸಮಿತಿಯ ಸದಸ್ಯರಾದ ರಸಾಯನ ವಿಜ್ಞಾನ ಬೋಧಕ ಪಿ.ವಿ.ಕುಲಕರ್ಣಿ, ಭೌತವಿಜ್ಞಾನದ ಬೋಧಕಿ ಮನೀಶಾ ಗುರುನಾಥ ಮಂಧಾರೆ, ಜೀವವಿಜ್ಞಾನದ ಬೋಧಕಿ ಮನೀಶಾ ಸಂಜಯ್‌ ಹವಾಲ್ದಾರ್‌ ಅವರಿಗೆ ವಹಿಸಲಾಗಿತ್ತು. ಅವರು ಅಂತಿಮ ಪ್ರಶ್ನೆಗಳನ್ನು ಕಂಠಪಾಠ ಮಾಡಿಕೊಂಡು, ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳ ಆಯ್ದ ಗುಂಪಿನ ಜತೆ ಹಂಚಿಕೊಂಡಿದ್ದರು ಎಂಬುದು ಗೊತ್ತಾಗಿದೆ' ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಪ್ರಶ್ನೆಪತ್ರಿಕೆ ತಯಾರಿಕೆ ಮತ್ತು ಅನುವಾದ ಕಾರ್ಯ ಪೂರ್ಣಗೊಳಿಸಿ, ಪ್ರಶ್ನೆಪತ್ರಿಕೆಗೆ ಅಂತಿಮ ರೂಪ ನೀಡಲು ಈ ಬೋಧಕರಿಗೆ ಸಾಕಷ್ಟು ಸಮಯ ದೊರೆತಿತ್ತು. ಈ ಪ್ರಕ್ರಿಯೆ ನಡೆಯುವ ಅವಧಿಯಲ್ಲಿ ಈ ಬೋಧಕರನ್ನು ಹಲವು ದಿನಗಳವರೆಗೆ ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಆದರೆ ಅವರಿಗೆ ತಮ್ಮ ಮನೆಗಳಿಗೆ ಹೋಗಲು ಅನುವು ಮಾಡಿಕೊಡಲಾಗಿತ್ತು. ಈ ವೇಳೆಯಲ್ಲಿ ಅವರು ಟ್ಯೂಷನ್‌ ನಡೆಸಿ, ಮರುದಿನ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂಬುದು ಪತ್ತೆಯಾಗಿದೆ' ಎಂದು ಅವರು ವಿವರಿಸಿದ್ದಾರೆ.

ಈ ಬೋಧಕರು ಪ್ರಶ್ನೆಪತ್ರಿಕೆಯ ಅಂತಿಮ ಆವೃತ್ತಿಯಲ್ಲಿದ್ದ ಪ್ರಶ್ನೆಗಳನ್ನು ಕಂಠಪಾಠ ಮಾಡಿ, ಮನೆಗೆ ಬಂದ ಬಳಿಕ ಪ್ರಶ್ನೆಗಳ ಸಂಗ್ರಹವನ್ನು ಸಿದ್ಧಪಡಿಸುತ್ತಿದ್ದರು ಮತ್ತು ಅವುಗಳನ್ನು ನಿರ್ದಿಷ್ಟ ವಿದ್ಯಾರ್ಥಿಗಳ ಗುಂಪಿಗೆ 'ಅತ್ಯಂತ ಪ್ರಮುಖ' ಪ್ರಶ್ನೆಗಳು ಎಂದು ಹಂಚಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಬ್ಯೂಟಿಷಿಯನ್‌ ಪಾತ್ರ:

'ಪ್ರಶ್ನೆಪತ್ರಿಕೆಯ ವ್ಯಾಪಕ ಸೋರಿಕೆ ಹಿಂದೆ ಬ್ಯೂಟಿಷಿಯನ್‌ ಮನೀಶಾ ವಾಘ್ಮಾರೆ ಅವರ ಪಾತ್ರ ಹೆಚ್ಚಿದೆ. ಈ ಬೋಧಕರಿಗೆ ವಾಘ್ಮಾರೆ ಪರಿಚಿತರಾಗಿದ್ದರು. ಅವರು, ತರಗತಿಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಂದ 'ಅತ್ಯಂತ ಪ್ರಮುಖ' ಪ್ರಶ್ನೆಗಳ ಸಂಗ್ರಹ ಪಡೆದು, ಅದನ್ನು ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಟೈಪ್‌ ಮಾಡಿ ಧನಂಜಯ್‌ ಎನ್‌ ಲೋಖಂಡೆಗೆ ಮಾರಾಟ ಮಾಡಿದ್ದರು. ಲೋಖಂಡೆ ಅದನ್ನು ಮಧ್ಯವರ್ತಿಗಳಿಗೆ ಹಸ್ತಾಂತರಿಸಿದ್ದರು. ಈ ಮೂಲಕ ಪ್ರಶ್ನೆಪತ್ರಿಕೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗಿತ್ತು' ಎಂದು ಅವರು ಮಾಹಿತಿ ನೀಡಿದ್ದಾರೆ.

'ಈ ಪ್ರಕರಣದಲ್ಲಿ ವಾಘ್ಮಾರೆ ಭಾಗಿ ಆಗಿರದಿದ್ದರೆ, ಪ್ರಶ್ನೆಪತ್ರಿಕೆ ಹೆಚ್ಚಿನ ಆಕಾಂಕ್ಷಿಗಳಿಗೆ ತಲುಪುತ್ತಿರಲಿಲ್ಲ. ಆಗ ಈ ಅಕ್ರಮ ಬೆಳಕಿಗೆ ಬರುತ್ತಿರಲಿಲ್ಲ ಎನಿಸುತ್ತದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಹೀಗೆ ಮಾರಾಟವಾಗಿ ಹಂಚಿಕೆಯಾಗುತ್ತಿದ್ದ ಪ್ರಶ್ನೆಪತ್ರಿಕೆಯೊಂದು ಒಬ್ಬ ಪರೀಕ್ಷಾರ್ಥಿ ಕೈಗೆ ಸಿಕ್ಕಿತ್ತು. ಅವರು ಅದನ್ನು ಎನ್‌ಟಿಎ ಗಮನಕ್ಕೆ ತಂದರು. ಎನ್‌ಟಿಎ ಮೇ 3ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಿತು.

ಬಳಿಕ ಶಿಕ್ಷಣ ಸಚಿವಾಲಯ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ಸಿಬಿಐ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿ, ಮೂವರು ಬೋಧಕರು, ವಾಘ್ಮಾರೆ, ಕೋಚಿಂಗ್‌ ಕೇಂದ್ರಗಳ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳು ಸೇರಿದಂತೆ 13 ಆರೋಪಿಗಳನ್ನು ಬಂಧಿಸಿತು. ಅಲ್ಲದೆ ಈ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ.

ಆರೋಪಿಗಳಿಗೆ ಸೇರಿದ ಹಲವು ಬ್ಯಾಂಕ್‌ ಖಾತೆಗಳು, ಲಾಕರ್‌ಗಳು ಮತ್ತು ಡಿಮ್ಯಾಟ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಬಿಐ ಹೇಳಿದೆ.


 ಈ ಬಾರಿ ಭಿನ್ನ ಸ್ವರೂಪದ ಅಕ್ರಮ 2026ರ ನೀಟ್‌ ಯುಜಿ ಪರೀಕ್ಷಾ ಅಕ್ರಮವು 2024ರಲ್ಲಿ ನಡೆದ ಅಕ್ರಮಗಳಿಗಿಂತ ಭಿನ್ನ ಸ್ವರೂಪದ್ದಾಗಿದೆ. 2024ರಲ್ಲಿ ಪರೀಕ್ಷಾ ಕೇಂದ್ರದ ಉಸ್ತುವಾರಿಯೊಬ್ಬರು ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಜತೆ ಶಾಮೀಲಾಗಿ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾಗಿದ್ದರು. ಆಗ ತನಿಖೆಯ ಬಳಿಕ ಪ್ರಶ್ನೆಪತ್ರಿಕೆಯ ಗೋಪ್ಯತೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಪ್ರಶ್ನೆಪತ್ರಿಕೆ ಸಾಗಣೆ ನಿರ್ವಹಣೆ ಮತ್ತು ಪರೀಕ್ಷಾ ನಡವಳಿಕೆಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವಂತೆ ಎನ್‌ಟಿಎಗೆ ಸಲಹೆಗಳನ್ನು ನೀಡಲಾಗಿತ್ತು ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಸಲಹೆಗಳನ್ನು ಎನ್‌ಟಿಎ 2025 ಮತ್ತು 2026ರ ನೀಟ್‌ ಪರೀಕ್ಷೆಗಳ ಸಂದರ್ಭದಲ್ಲಿ ಜಾರಿಗೆ ತಂದಿತು. ಹೀಗಾಗಿ ಪ್ರಶ್ನೆ ಪತ್ರಿಕೆ ಸಾಗಣೆ ವೇಳೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಆದರೆ 2026ರಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರಿಂದಲೇ ಪತ್ರಿಕೆ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries