ಇಸ್ಲಾಮಾಬಾದ್: 'ಪಾಕಿಸ್ತಾನಕ್ಕೆ ಹರಿಯುವ ನದಿಗಳ ನಿಯಂತ್ರಣಕ್ಕೆ ಭಾರತ ಯತ್ನಿಸುತ್ತಿದೆ. ವಿಶೇಷವಾಗಿ ಸಿಂಧೂ ನದಿ ನೀರನ್ನು ತನ್ನ 'ಯುದ್ಧತಂತ್ರದ ಸಾಧನ' ಎಂಬಂತೆ ಪರಿಗಣಿಸುತ್ತದೆ' ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಚೇರಿ ವಕ್ತಾರ ತಾಹಿರ್ ಅಂದ್ರಾಬಿ,'ಪಾಕಿಸ್ತಾನವು ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸುತ್ತಿರುವ ಭಾರತ, ಇದೇ ನೆಪದಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ನಿರ್ಧಾರ ಕೈಗೊಂಡಿದೆ.
ಆ ಮೂಲಕ, ಪಾಕಿಸ್ತಾನಕ್ಕೆ ನ್ಯಾಯಬದ್ಧವಾದ ನೀರಿನ ಹರಿವನ್ನು ತಡೆಯುತ್ತಿದೆ' ಎಂದು ಹೇಳಿದರು.
'ಈ ಒಪ್ಪಂದವನ್ನು ಅಮಾನತಿನಲ್ಲಿ ಇಡುವುದಕ್ಕೆ ಭಯೋತ್ಪಾದನೆ ಕಾರಣವಲ್ಲ. ಅಂತರರಾಷ್ಟ್ರೀಯ ನದಿಯ ಮೇಲೆ ನಿಯಂತ್ರಣ ಸಾಧಿಸುವುದು ಹಾಗೂ ಅದನ್ನು ಯುದ್ಧತಂತ್ರದ ಸಾಧನವನ್ನಾಗಿ ಪರಿಗಣಿಸಬೇಕು ಎಂಬ ಭಾರತದ ನಾಯಕತ್ವದ ಸನ್ನಾಹವೇ ಇದಕ್ಕೆ ಕಾರಣ' ಎಂದು ಅಂದ್ರಾಬಿ ಹೇಳಿದರು.

