ನ್ಯೂಯಾರ್ಕ್: ಪೆಪ್ಸಿಕೋದ ಮಾಜಿ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಇಂದ್ರಾ ನೂಯಿ ಅವರು, ಭಾರತ ಸೇರಿದಂತೆ ವಿಶ್ವದ ಬೇರೆ ಯಾವುದೇ ದೇಶದಲ್ಲಿ ತಾವು ಜಾಗತಿಕ ಕಂಪೆನಿಯೊಂದರ ಸಿಇಒ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಸಂಸ್ಥೆಯ ನಿರ್ದೇಶಕಿ ಕಾಂಡೋಲೀಝಾ ರೈಸ್ ಅವರೊಂದಿಗೆ ನಾಯಕತ್ವ, ಹೊಸ ಆವಿಷ್ಕಾರ ಮತ್ತು ಅರ್ಹತೆ ಕುರಿತ ಸಂವಾದದಲ್ಲಿ ನೂಯಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ವ್ಯವಸ್ಥೆಯು ಪ್ರತಿಭೆ ಮತ್ತು ಅರ್ಹತೆಗೆ ಹೆಚ್ಚಿನ ಮಹತ್ವ ನೀಡುವುದರಿಂದ, ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಒಂದಾದ ಪೆಪ್ಸಿಕೊವನ್ನು ಮುನ್ನಡೆಸಲು ತಮಗೆ ಅವಕಾಶ ದೊರೆಯಿತು ಎಂದು ಅವರು ಹೇಳಿದರು.
'ಅಮೆರಿಕದಲ್ಲಿ ಒಬ್ಬ ವಲಸಿಗ ಯಾವುದೇ ಹಿನ್ನೆಲೆ ಅಥವಾ ಸಂಪತ್ತಿಲ್ಲದೆ ಬಂದು, ದೇಶದ ಪ್ರತಿಷ್ಠಿತ ಕಂಪೆನಿಯೊಂದರ ಮುಖ್ಯಸ್ಥನಾಗಲು ಅಥವಾ ಮುಖ್ಯಸ್ಥೆಯಾಗಲು ಸಾಧ್ಯವಿದೆ. ಭಾರತ ಸೇರಿದಂತೆ ವಿಶ್ವದ ಬೇರೆ ಯಾವುದೇ ದೇಶದಲ್ಲಿ ನಾನು ಸಿಇಒ ಆಗಲು ಸಾಧ್ಯವಾಗುತ್ತಿರಲಿಲ್ಲ' ಎಂದು ನೂಯಿ ಹೇಳಿದ್ದಾರೆ.
'ಅಮೆರಿಕದ ವ್ಯವಸ್ಥೆಯು ಅರ್ಹತೆಯನ್ನು ಆಧರಿಸಿದೆ. ಇಲ್ಲಿ ವ್ಯಕ್ತಿ ಪುರುಷನೋ ಅಥವಾ ಮಹಿಳೆಯೋ ಎಂಬುದನ್ನು ಪರಿಗಣಿಸುವುದಿಲ್ಲ. ಅತ್ಯುತ್ತಮ ಪ್ರತಿಭೆಗೆ ಅವಕಾಶ ಸಿಗಬೇಕು ಎಂಬುದೇ ಮುಖ್ಯ' ಎಂದೂ ಅವರು ಹೇಳಿದ್ದಾರೆ.
ಅಮೆರಿಕವು ಕೇವಲ ತಾಂತ್ರಿಕ ಆವಿಷ್ಕಾರಗಳ ಕೇಂದ್ರವಲ್ಲ; ಆ ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವಂತೆ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ನೂಯಿ ಅಭಿಪ್ರಾಯಪಟ್ಟಿದ್ದಾರೆ.
'ತಂತ್ರಜ್ಞಾನ ಅಭಿವೃದ್ಧಿಪಡಿಸುವುದಷ್ಟೇ ಸಾಕಾಗುವುದಿಲ್ಲ. ಅದನ್ನು ವಾಣಿಜ್ಯೀಕರಣಗೊಳಿಸಿ ಜಗತ್ತಿನಲ್ಲಿ ಬದಲಾವಣೆ ತರುವ ಮಟ್ಟಕ್ಕೆ ಕೊಂಡೊಯ್ಯುವುದು ಮುಖ್ಯ' ಎಂದು ಅವರು ಹೇಳಿದ್ದಾರೆ.
ನೂಯಿ ಅವರ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಹಲವರು ಅವರ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ. ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಯಶಸ್ಸು ಸಾಧಿಸಿರುವ ಭಾರತೀಯ ಮಹಿಳಾ ಉದ್ಯಮಿಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ.
'ಇಂದ್ರಾ ನೂಯಿ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಭಾರತವನ್ನು ಅರ್ಹತೆಯ ಆಧಾರಿತ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿಡುವುದು ಅವರ ವೈಯಕ್ತಿಕ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
'ಭಾರತದಲ್ಲಿ ಸಿಇಒ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂಬ ಹೇಳಿಕೆ, ಇಂದಿನ ಭಾರತದ ಉದ್ಯಮ ವಲಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಭಾರತೀಯ ಪ್ರತಿಭೆಗಳು ಈಗಾಗಲೇ ಜಾಗತಿಕ ಕಂಪೆನಿಗಳನ್ನು ಮುನ್ನಡೆಸುತ್ತಿವೆ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
'ಅಮೆರಿಕವು ನಿಮಗೆ ಉತ್ತಮ ಅವಕಾಶಗಳನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಭಾರತದಲ್ಲಿ ಸಿಇಒ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳುವುದು, ಅನೇಕ ಭಾರತೀಯ ಮಹಿಳಾ ಸಿಇಒಗಳ ಸಾಧನೆಯನ್ನು ಕಡೆಗಣಿಸಿದಂತಾಗಿದೆ' ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
'ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ನೈಕಾದ ಫಲ್ಗುಣಿ ನಯ್ಯರ್, ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚರ್ ಹಾಗೂ ಎಚ್‌ಡಿಎಫ್‌ಸಿ ಲೈಫ್‌ನ ವಿಭಾ ಪದಾಲ್ಕರ್ ಸೇರಿದಂತೆ ಹಲವು ಮಹಿಳಾ ಉದ್ಯಮ ನಾಯಕರ ಸಾಧನೆಗಳನ್ನು ಕಡೆಗಣಿಸಲಾಗದು' ಎಂದು ಮತ್ತೊಬ್ಬರು ಹೇಳಿದ್ದಾರೆ.
ಸಂವಾದದ ವೇಳೆ ಭಾರತ ಮತ್ತು ಚೀನಾವನ್ನು ಹೋಲಿಸಿದ ನೂಯಿ, ಚೀನಾ ತುಲನಾತ್ಮಕವಾಗಿ ಹೆಚ್ಚು ಏಕರೂಪ ಮತ್ತು ಸಂಘಟಿತ ದೇಶವಾಗಿರುವುದರಿಂದ ಅಲ್ಲಿ ಕಾರ್ಯನಿರ್ವಹಿಸುವುದು ಸುಲಭ ಎಂದು ಅಭಿಪ್ರಾಯಪಟ್ಟಿದ್ದಾರೆ.
''ಚೀನಾ ಹೆಚ್ಚು ವ್ಯವಸ್ಥಿತ ದೇಶವಾಗಿದೆ. ಭಾರತವು ವೈವಿಧ್ಯಮಯ ಮತ್ತು ಸಂಕೀರ್ಣ ದೇಶ. ಆದರೆ ಭಾರತದ ಸೌಂದರ್ಯವೇ ಅದರ ವೈವಿಧ್ಯತೆ ಮತ್ತು ಚೈತನ್ಯದಲ್ಲಿದೆ. ಅದನ್ನು ಅರ್ಥಮಾಡಿಕೊಂಡರೆ, ಮತ್ತೆ ಭಾರತಕ್ಕೆ ಬರಲು ಮನಸ್ಸಾಗುತ್ತದೆ' ಎಂದು ನೂಯಿ ಹೇಳಿದ್ದಾರೆ.

