HEALTH TIPS

ಡಿಜಿಟಲ್ ದಾಖಲೆಗಳಿಂದ ಆದಿವಾಸಿ ರೈತರ ಜಮೀನೇ ನಾಪತ್ತೆ: ತಲೆಮಾರುಗಳ ಹಕ್ಕಿಗಾಗಿ ಮಧ್ಯಪ್ರದೇಶದ ರೈತರ ಹೋರಾಟ!

 ಕ್ಲಾ ಚಾಮರ್ ಪಾಲಿಗೆ ಸಣ್ಣ ಭೂಮಿಯ ಒಡೆತನವೇ ಒಂದು ದೊಡ್ಡ ಭದ್ರತೆಯಾಗಿತ್ತು. ಮಧ್ಯಪ್ರದೇಶದ ಖಾರ್ಗೋನ್‌ ಜಿಲ್ಲೆಯ ದಗಡ್‌ಖೇಡಿ ಗ್ರಾಮದಲ್ಲಿರುವ 2.23 ಹೆಕ್ಟೇರ್ ಜಮೀನಿನ ಮಾಲೀಕ ತಾವು ಎಂಬುದನ್ನು ಸಾಬೀತುಪಡಿಸುವ ಸರ್ಕಾರಿ ದಾಖಲೆಗಳನ್ನು ಈ 80 ವರ್ಷದ ವೃದ್ಧ ರೈತ ಕಳೆದ ಎರಡು ದಶಕಗಳಿಂದ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. 


ಅವುಗಳಲ್ಲಿ ಒಂದು, ಸಣ್ಣ ಹಿಡುವಳಿ ಹೊಂದಿರುವ ಆದಿವಾಸಿ ರೈತರಿಗಾಗಿ 2001ರಲ್ಲಿ ರಾಜ್ಯ ಕಂದಾಯ ಇಲಾಖೆ ಜಾರಿಗೆ ತಂದ ಯೋಜನೆಯಡಿ ನೀಡಲಾದ 4x6 ಇಂಚಿನ ಭೂಮಿ ಹಕ್ಕು ಮತ್ತು ಸಾಲದ ಪುಸ್ತಕ. ಮತ್ತೊಂದು, ಅದೇ ವರ್ಷ ಅವರ ಹೆಸರಿನಲ್ಲಿ ನೋಂದಣಿಯಾದ ಜಮೀನಿನ ನೋಟರಿ ಪತ್ರ.

ದಗಡ್‌ಖೇಡಿ ಗ್ರಾಮವು ಭಗವಾನ್‌ಪುರ ತಹಸಿಲ್ ವ್ಯಾಪ್ತಿಗೆ ಬರುತ್ತದೆ. ಈ ಪುಸ್ತಕದಲ್ಲಿ ಭಗವಾನ್‌ಪುರ ತಹಶೀಲ್ದಾರರ ಸಹಿಯಿದೆ. ಅಷ್ಟೇ ಅಲ್ಲದೆ, ಅಕ್ಲಾ ಅವರು ಈ ಜಮೀನಿನ ಮೇಲೆ ವರ್ಷಗಳಿಂದ ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಸಾಲದ ವಿವರಗಳೂ ಇದರಲ್ಲಿವೆ.

ಆದರೆ, ಅಕ್ಲಾ ಅವರು ಮಧ್ಯಪ್ರದೇಶದ ಭೂ ದಾಖಲೆಗಳ ಪೋರ್ಟಲ್ ಆದ 'ಎಂಪಿ ಬಿಲೇಖ್'ನಲ್ಲಿ ತಮ್ಮ ಜಮೀನಿನ ವಿವರಗಳನ್ನು ಹುಡುಕಿದಾಗ ಏನೂ ಸಿಗುತ್ತಿಲ್ಲ. ಈ ಪೋರ್ಟಲ್‌ನಲ್ಲಿ ಜಿಲ್ಲೆ, ತಹಸಿಲ್, ಗ್ರಾಮ, ಸರ್ವೆ ನಂಬರ್ ಅಥವಾ ಭೂ ಮಾಲೀಕರ ಹೆಸರನ್ನು ಬಳಸಿ ದಾಖಲೆಗಳನ್ನು ಹುಡುಕಬಹುದು. ಆದರೆ ಅಕ್ಲಾ ಅವರ ದಾಖಲೆಗಳಲ್ಲಿರುವ ಪ್ಲಾಟ್ ಅಥವಾ ಖಸ್ರಾ (ಸರ್ವೆ) ನಂಬರ್ ಈ ಪೋರ್ಟಲ್‌ನಲ್ಲಿಯೇ ಕಾಣಿಸುತ್ತಿಲ್ಲ.ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ದಗಡ್‌ಖೇಡಿ ಗ್ರಾಮದ ಸುಮಾರು 40 ಬರೇಲಾ ಮತ್ತು ಭಿಲ್ ಆದಿವಾಸಿ ರೈತ ಕುಟುಂಬಗಳು ಅಕ್ಲಾ ಅವರಂತೆಯೇ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಮಾಲೀಕತ್ವವನ್ನು ದೃಢೀಕರಿಸುವ ಭೂಮಿ ಹಕ್ಕು ಮತ್ತು ಸಾಲದ ಪುಸ್ತಕಗಳು ಇವರ ಬಳಿ ಇವೆ.

ಆದರೆ ಭೂ ದಾಖಲೆಗಳ ಪೋರ್ಟಲ್‌ನಲ್ಲಿ, ಗ್ರಾಮದ ದಾಖಲೆಗಳ ಅಡಿಯಲ್ಲಿ ಅವರ ಹೆಸರುಗಳಾಗಲಿ ಅಥವಾ ಖಸ್ರಾ (ಸರ್ವೆ) ನಂಬರ್‌ಗಳಾಗಲಿ ಕಾಣಿಸುತ್ತಿಲ್ಲ. ಮಧ್ಯಪ್ರದೇಶದಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ ವಿಧಾನದಲ್ಲಿರುವ ಒಂದು ದೊಡ್ಡ ಸಮಸ್ಯೆಯ ಭಾಗ ಇದು ಎಂದು scroll.in ವರದಿ ಮಾಡಿದೆ.

ಗ್ರಾಮದ ಡಿಜಿಟಲ್ ಭೂ ದಾಖಲೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ, ಜೂನ್ ತಿಂಗಳಿನಲ್ಲಿ ಅಕ್ಲಾ ಮತ್ತು ದಗಡ್‌ಖೇಡಿಯ 100ಕ್ಕೂ ಹೆಚ್ಚು ನಿವಾಸಿಗಳು ಭಗವಾನ್‌ಪುರ ತಹಸಿಲ್ ಕಚೇರಿಯ ಮುಂದೆ ಒಂಬತ್ತು ದಿನಗಳ ಕಾಲ ಧರಣಿ ನಡೆಸಿದರು. ಹಗಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೂ ಲೆಕ್ಕಿಸದೆ, ಅಕ್ಲಾ ಮತ್ತು ಇತರರು ಕೇವಲ ಒಂದು ಟೆಂಟ್ ನೆರಳಿನಲ್ಲಿ, ದಿನಾ ಖಿಚಡಿ ಮಾತ್ರ ಉಣ್ಣುತ್ತಾ ಕಚೇರಿಯ ಹೊರಗೇ ಮಲಗಿದರು.

ಇದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯು, ಯಾರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆ ಪ್ರಕ್ರಿಯೆ ನಡೆಸಲು 12 ಪಟ್ವಾರಿಗಳ (ಕಂದಾಯ ಅಧಿಕಾರಿಗಳು) ತಂಡವನ್ನು ಕಳುಹಿಸಿಕೊಟ್ಟಿತು. ಆದರೆ, ಈ ಜಮೀನು ತಮಗೆ ಸೇರಿದ್ದೆಂದು ಡಿಜಿಟಲ್ ದಾಖಲೆಗಳಲ್ಲಿ ನಮೂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.

ಸದ್ಯಕ್ಕೆ ರೈತರು ಸಮೀಕ್ಷೆ ಮುಗಿಯುವುದನ್ನು ಮತ್ತು ಸರ್ಕಾರ ತಮ್ಮ ಜಮೀನುಗಳ ಬಗ್ಗೆ ಸ್ಪಷ್ಟತೆ ನೀಡುವುದನ್ನು ಕಾಯುತ್ತಿದ್ದಾರೆ. ಒಂದು ವೇಳೆ ಭೂ ದಾಖಲೆಗಳನ್ನು ಸರಿಯಾಗಿ ನವೀಕರಿಸದಿದ್ದರೆ, ಮತ್ತೊಂದು ಪ್ರತಿಭಟನೆ ಆರಂಭಿಸುವುದಾಗಿ ಅವರು ಎಚ್ಚರಿಸಿದ್ದಾರೆ.

Photo Credit : scroll.in

ಡಿಜಿಟಲೀಕರಣದ ಸಮಸ್ಯೆಗಳು

ಕೇಂದ್ರ ಸರ್ಕಾರದ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮದ ಅಡಿಯಲ್ಲಿ ಮಧ್ಯಪ್ರದೇಶವು ಮೊದಲ ಬಾರಿಗೆ 1999-2000 ರಲ್ಲಿ ತನ್ನ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಪ್ರಾರಂಭಿಸಿತು. ಈ ಯೋಜನೆಯನ್ನು ನಂತರ 2008 ರಲ್ಲಿ 'ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಶನ್ ಪ್ರೋಗ್ರಾಂ'ಗೆ ಸೇರಿಸಲಾಯಿತು. ಇದರ ಮೂಲಕ ರಾಜ್ಯವು ಹಂತಹಂತವಾಗಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ನವೀಕರಿಸುವ ಕೆಲಸವನ್ನು ಮುಂದುವರೆಸಿತು. 2023 ಡಿಸೆಂಬರ್ ನಲ್ಲಿ , ಕೇಂದ್ರ ಸರ್ಕಾರದ ಭೂ ದಾಖಲೆಗಳ ಇಲಾಖೆಯು ಶೇಕಡಾ 99 ರಷ್ಟು ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಹೇಳಿಕೊಂಡಿತ್ತು.

ಆದರೆ ದಗಡ್‌ಖೇಡಿಯ ಭೂ ದಾಖಲೆಗಳು ಯಾವಾಗ ಆನ್‌ಲೈನ್‌ಗೆ ಬಂದವು ಎಂಬುದು ಸ್ಪಷ್ಟವಾಗಿಲ್ಲ.

ಸರ್ಕಾರ ನೀಡುವ ಸಹಾಯಧನವನ್ನು ಪಡೆಯಲು ರಾಜ್ಯದ ಭೂ ದಾಖಲೆ ಪೋರ್ಟಲ್ ಆದ 'ಎಂಪಿ ಭುಲೇಖ್'ನಲ್ಲಿ ಹೆಸರು ನಮೂದಾಗಿರಬೇಕು ಎಂಬ ನಿಯಮ ಬಂದ ಮೇಲಷ್ಟೇ ತಮಗೆ ಡಿಜಿಟಲೀಕರಣದ ಬಗ್ಗೆ ತಿಳಿಯಿತು ಎಂದು ಹಳ್ಳಿಯ ರೈತರು ಹೇಳುತ್ತಾರೆ. ಇದು ಸುಮಾರು 2014 ರ ಸುಮಾರಿಗೆ ನಡೆದಿರಬಹುದು ಎನ್ನಲಾಗಿದೆ.

ಅಲ್ಲಿಯವರೆಗೂ ಅವರು ತಮ್ಮ ಭೂಮಿ ಹಕ್ಕು ಮತ್ತು ಸಾಲದ ಪುಸ್ತಕವನ್ನು ಬಳಸಿಕೊಂಡು ಸಹಾಯಧನದ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಖರೀದಿಸುತ್ತಿದ್ದರು ಮತ್ತು ಸಹಕಾರಿ ಸಾಲಗಳನ್ನು ಪಡೆಯುತ್ತಿದ್ದರು ಎಂದು ನಾಲ್ಕು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಏಳು ಜನರ ಕುಟುಂಬವನ್ನು ಸಲಹುತ್ತಿರುವ ಸುಭಾಷ್ ಭಾಯ್ ತಿಳಿಸಿದರು. ಅವರು ತಮ್ಮ ಕುಟುಂಬದ, ಹಳೆಯದಾಗಿ ಹಳದಿ ಬಣ್ಣಕ್ಕೆ ತಿರುಗಿರುವ ಪುಸ್ತಕವನ್ನು ತೋರಿಸಿದರು. ಅದರಲ್ಲಿ 1995 ಮತ್ತು 2013 ರ ದಾಖಲೆಗಳಿದ್ದವು.

ಆನ್‌ಲೈನ್‌ನಲ್ಲಿ ತಮ್ಮ ಖಸ್ರಾ ಅಥವಾ ಪ್ಲಾಟ್ ನಂಬರ್ ಸಿಗದೇ ಹೋದಾಗ, ರೈತರು ಸಹಾಯಕ್ಕಾಗಿ ಆಡಳಿತ ಮಂಡಳಿಯನ್ನು ಸಂಪರ್ಕಿಸಿದರು. 2022 ರಿಂದೀಚೆಗೆ, ಅವರು ಸರಿಸುಮಾರು ಪ್ರತಿ ಆರು ತಿಂಗಳಿಗೊಮ್ಮೆ ಆಡಳಿತ ಮಂಡಳಿಗೆ ಮನವಿ ಪತ್ರವನ್ನು ಸಲ್ಲಿಸುತ್ತಲೇ ಬಂದಿದ್ದಾರೆ.

ಆದರೆ ಮಧ್ಯಪ್ರದೇಶ ನಾಜುಲ್ ನಿವರ್ತನ್ ನಿಯಮ್ 2020ರ ಅಡಿಯಲ್ಲಿ (ಸರ್ಕಾರಿ ಆಸ್ತಿ ಎಂದು ವರ್ಗೀಕರಿಸಲಾದ ಜಮೀನನ್ನು ವಾಣಿಜ್ಯ ಬಳಕೆಗೆ ನೀಡಲು ಸರ್ಕಾರಕ್ಕೆ ಅನುಮತಿ ನೀಡುವ ಕಾಯ್ದೆ), ಖಾರ್ಗೋನ್‌ನ ಜಿಲ್ಲಾ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರವು ಕೈಗಾರಿಕಾ ವಲಯಕ್ಕಾಗಿ ದಗಡ್‌ಖೇಡಿಯ ಸುಮಾರು 200 ಎಕರೆ ಜಮೀನನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದಾಗ ಈ ವರ್ಷ ಈ ವಿಷಯವು ಹೆಚ್ಚು ಗಂಭೀರ ರೂಪ ತಾಳಿತು. ಫೆಬ್ರವರಿಯಲ್ಲಿ, ಈ ಪ್ರಕ್ರಿಯೆಯನ್ನು ಮುಂದುವರಿಸುವ ಮುನ್ನ ತಹಶೀಲ್ದಾರರು ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಎನ್‌ಒಸಿ ಕೋರಿದ್ದರು.

ಅದೇ ತಿಂಗಳು, ದಗಡ್‌ಖೇಡಿ ಗ್ರಾಮ ಸಭೆಯು ಈ ಯೋಜನೆಯ ವಿರುದ್ಧ ಮತ ಚಲಾಯಿಸಿತು ಮತ್ತು ಇದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತು. ಪರಿಶಿಷ್ಟ ಪ್ರದೇಶಗಳ ಪಂಚಾಯತ್‌ಗಳ ವಿಸ್ತರಣೆ ಕಾಯ್ದೆ (PESA) 1996, ಪರಿಶಿಷ್ಟ ಪ್ರದೇಶಗಳಲ್ಲಿನ ಆದಿವಾಸಿ ಸಮುದಾಯಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಮಧ್ಯಪ್ರದೇಶವು ಸುದೀರ್ಘ ವಿಳಂಬದ ನಂತರ 2022 ರಲ್ಲಿ ತನ್ನದೇ ಆದ 'ಪೆಸಾ' ನಿಯಮಗಳನ್ನು ಜಾರಿಗೆ ತಂದಿತ್ತು.

ಪ್ರಸ್ತಾವಿತ ಕೈಗಾರಿಕಾ ವಲಯವು ಸರ್ಕಾರಿ ಜಮೀನಿನಲ್ಲಿ ಬರಬೇಕಿತ್ತಾದರೂ, ತಾವು ಸಾಗುವಳಿ ಮಾಡುತ್ತಿರುವ ಪಕ್ಕದ ಜಮೀನುಗಳ ಸ್ಥಿತಿಯ ಬಗ್ಗೆ ಈ ಕ್ರಮವು ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಏಕೆಂದರೆ ಈ ಜಮೀನುಗಳು ಒಂದೋ ಡಿಜಿಟಲ್ ದಾಖಲೆಗಳಿಂದ ನಾಪತ್ತೆಯಾಗಿವೆ ಅಥವಾ ತಪ್ಪಾಗಿ ವರ್ಗೀಕರಿಸಲ್ಪಟ್ಟಿವೆ.

ಭೂಮಿ ಮಾತ್ರವೇ ನಮ್ಮಲ್ಲಿರೋದು. ತಮ್ಮ ಕುಟುಂಬದ ತಲೆಮಾರುಗಳು ಈ ಭೂಮಿಯಲ್ಲಿ ಬೇಸಾಯ ಮಾಡುವುದನ್ನು ನೋಡಿದ್ದೇವೆ. ನಮ್ಮ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನ ನಡೆದರೆ, ಅದಕ್ಕಿಂತ ನಮ್ಮ ಪ್ರಾಣವನ್ನೇ ತೆಗೆದುಕೊಳ್ಳುವುದು ಲೇಸು ಅಂತಾರೆ ಸುಭಾಷ್ ಭಾಯ್ ಅವರ ತಾಯಿ ಥೆಬ್ರಿ ಬಾಯಿ.

ತಮ್ಮ ಬಳಿ ಸರ್ಕಾರ ನೀಡಿರುವ ಭೂ ದಾಖಲೆಗಳಿದ್ದರೂ ಈ ರೀತಿಯ ವ್ಯತ್ಯಾಸಗಳು ಏಕೆ ಕಂಡುಬರುತ್ತಿವೆ ಎಂಬುದನ್ನು ಆಡಳಿತ ಮಂಡಳಿ ವಿವರಿಸಬೇಕು ಎಂದು ಸುಭಾಷ್ ಭಾಯ್ ಹೇಳಿದರು. "ನಾವು ಇನ್ನು ಕಾಯಲು ಬಯಸುವುದಿಲ್ಲ, ನಮಗೆ ಸ್ಪಷ್ಟತೆ ಬೇಕು" ಎಂದು ಹೇಳಿದ ಅವರು, ಮುಂಗಾರು ಬಿತ್ತನೆ ಹಂಗಾಮಿಗಾಗಿ ಜಮೀನು ಸಿದ್ಧಪಡಿಸುವ ಸಮಯ ಇದಾಗಿದ್ದರೂ, ಅನೇಕ ಗ್ರಾಮಸ್ಥರು ಪ್ರತಿಭಟನೆಗಾಗಿ ತಮ್ಮ ಹೊಲಗಳನ್ನು ಬಿಟ್ಟು ಬಂದಿದ್ದಾರೆ ಎಂದರು.

ಆದರೆ, ಆಡಳಿತ ಮಂಡಳಿಯು ಗ್ರಾಮಸ್ಥರಿಗೆ ಈ ಜಮೀನಿನ ಮೇಲೆ ಯಾವುದೇ ಹಕ್ಕಿಲ್ಲ ಎಂದು ಹೇಳಿದೆ. ಖಾರ್ಗೋನ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸತ್ಯೇಂದ್ರ ಬೈರವಾ ಮಾತನಾಡಿ, ಸಮುದಾಯದವರು ಪ್ರತಿಭಟನೆ ನಡೆಸುತ್ತಿರುವ ಜಮೀನು "ಕಳೆದ 100 ವರ್ಷಗಳಿಂದ ಸರ್ಕಾರಿ ಜಮೀನಾಗಿದೆ" ಎಂದು ತಿಳಿಸಿದರು.

"ಭೂಮಿಯನ್ನು ಬಳಸುವುದು ಮತ್ತು ಅದನ್ನು ಖಾಸಗಿ ಆಸ್ತಿ ಎಂದು ಪರಿಗಣಿಸುವುದು ಅವರ ಆಯ್ಕೆಯಾಗಿದೆ" ಎಂದು ಬೈರವಾ ಹೇಳುತ್ತಾರೆ.

ರೈತರ ಬಳಿ ಇರುವ ಮಾಲೀಕತ್ವದ ದಾಖಲೆಗಳ ಬಗ್ಗೆ ಕೇಳಿದಾಗ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. "ನೀವು ದಾಖಲೆಗಳನ್ನು ನೋಡಲು ತಹಸಿಲ್ ಕಚೇರಿಯನ್ನು ಕೇಳಬಹುದು" ಎಂದು ಅವರು ಹೇಳಿದರು.

ಪ್ರತಿಭಟನೆಯ ಸಮಯದಲ್ಲಿ ಉಸ್ತುವಾರಿ ವಹಿಸಿದ್ದ ತಹಶೀಲ್ದಾರ್ ಸಂಜಯ್ ಚೌಹಾಣ್ ಅವರ ವರ್ಗಾವಣೆಯಾಗಿದೆ. ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು scroll.in ವರದಿ ಉಲ್ಲೇಖಿಸಿದೆ. ಅವರ ಸ್ಥಾನಕ್ಕೆ ಬರಬೇಕಾದ ಹೊಸ ತಹಶೀಲ್ದಾರ್ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.

ಆನ್‌ಲೈನ್ ದಾಖಲೆಗಳನ್ನು ಪರಿಶೀಲಿಸಲು ದಗಡ್‌ಖೇಡಿ ನಿವಾಸಿಗಳಿಗೆ ಸಹಾಯ ಮಾಡುತ್ತಿರುವ ನಿತಿನ್ ಎಂಬ ಕಾರ್ಯಕರ್ತರು, ದಾಖಲೆಗಳು ನಾಪತ್ತೆಯಾಗಿರುವುದಕ್ಕೆ ಒಂದು ಸಂಭಾವ್ಯ ಕಾರಣವನ್ನು ನೀಡಿದ್ದಾರೆ. 1960 ರ ದಶಕದವರೆಗೆ ಗ್ರಾಮದ ಬಹುಪಾಲು ಭೂಮಿಯನ್ನು ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿತ್ತು, ಆ ನಂತರ ಅದನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಕಂದಾಯ ಇಲಾಖೆಯು ಈ ದಾಖಲೆಗಳನ್ನು ವ್ಯವಸ್ಥಿತವಾಗಿ ನವೀಕರಿಸದೇ ಇರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

Photo Credit : scroll.in

►ದಾಖಲೆಗಳಲ್ಲಿನ ಲೋಪಗಳು

ಮಧ್ಯಪ್ರದೇಶದ ಆದಿವಾಸಿ ಪ್ರದೇಶಗಳಲ್ಲಿ ಐತಿಹಾಸಿಕವಾಗಿ ಭೂ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ರಾಜ್ಯದಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಶ್ರಮಿಸುತ್ತಿರುವ ಜಾಗೃತ್ ಆದಿವಾಸಿ ದಲಿತ ಸಂಘಟನೆಯ ಸದಸ್ಯೆ ಮಾಧುರಿ ತಿಳಿಸಿದ್ದಾರೆ.

"ಹೆಚ್ಚಿನ ಆದಿವಾಸಿ ಕುಟುಂಬಗಳ ಬಳಿ ಒಂದೊಮ್ಮೆ ಸಂಪೂರ್ಣ ಭೂ ದಾಖಲೆಗಳು ಇದ್ದಿದ್ದರೂ, ಇಂದು ಅವರ ಬಳಿ ಅವುಗಳು ಇಲ್ಲ" ಎಂದು ಅವರು ಹೇಳಿದರು.

ಭೂಮಿ ಮತ್ತು ಅರಣ್ಯ ಹಕ್ಕುಗಳಿಗಾಗಿ ಕೆಲಸ ಮಾಡುವ ಸಾಮಾಜಿಕ ಆಂದೋಲನವಾದ 'ಏಕತಾ ಪರಿಷತ್'ನ ರಾಷ್ಟ್ರೀಯ ಸಂಯೋಜಕ ರಮೇಶ್ ಶರ್ಮಾ ಮಾತನಾಡಿ, ಕಂದಾಯ ಆಡಳಿತದ ನಿರಂತರ ದುರ್ಬಲತೆಯು ಈ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ಹಿಂದೆ, ಮಧ್ಯಪ್ರದೇಶದಲ್ಲಿ ಭೂ ದಾಖಲೆಗಳಿಗೆ 'ಗಿರ್ದಾವರಿ' ಎಂಬ ಪ್ರಕ್ರಿಯೆಯೇ ಆಧಾರವಾಗಿತ್ತು. ವರ್ಷಕ್ಕೆ ಎರಡು ಬಾರಿ, ಪಟ್ವಾರಿಯು ತನ್ನ ವ್ಯಾಪ್ತಿಯ ಪ್ರತಿಯೊಂದು ಹೊಲಕ್ಕೂ ಭೇಟಿ ನೀಡಿ, ಯಾರು ಅಲ್ಲಿ ಬೇಸಾಯ ಮಾಡುತ್ತಿದ್ದಾರೆ ಮತ್ತು ಯಾವ ಬೆಳೆಯನ್ನು ಬಿತ್ತಲಾಗಿದೆ ಎಂಬುದನ್ನು ದಾಖಲಿಸುತ್ತಿದ್ದರು. ಭೂಮಿಯ ಮೇಲಿನ ರೈತರ ಹಕ್ಕು ಈ ದಾಖಲಾತಿಗಳಿಗೆ ಲಿಂಕ್ ಆಗಿರುತ್ತಿದ್ದರಿಂದ ಭೂ ದಾಖಲೆಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದವು.

"ಮಧ್ಯಪ್ರದೇಶದಲ್ಲಿ ಸುಮಾರು 20-22 ವರ್ಷಗಳ ಹಿಂದೆಯೇ ಗಿರ್ದಾವರಿ ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು" ಎಂದು ಶರ್ಮಾ ಹೇಳಿದರು. ನಿಧಿ ಮತ್ತು ಸಿಬ್ಬಂದಿಯ ಕೊರತೆಯನ್ನು ಇದಕ್ಕೆ ಅಧಿಕೃತ ಕಾರಣಗಳಾಗಿ ನೀಡಲಾಗಿತ್ತು. ಇದು ನಿಂತುಹೋದ ನಂತರ, ದಾಖಲೆಗಳನ್ನು ನವೀಕರಿಸಲಿಲ್ಲ. ಇದರಿಂದಾಗಿ ದಾಖಲೆಗಳಲ್ಲಿ ಅಕ್ರಮ ಎಸಗುವುದು ಅಥವಾ ಅವುಗಳು ಕಾಣೆಯಾಗುವುದು ಸುಲಭವಾಯಿತು.

ಸರ್ಕಾರಿ ಆಸ್ತಿ ಎಂದು ದಾಖಲಾಗಿರುವ ಜಮೀನಿನಲ್ಲಿ ರೈತರು ಬೇಸಾಯ ಮಾಡುತ್ತಿರುವ ಸಂದರ್ಭಗಳನ್ನು ದಾಖಲಿಸುವ 'ಅತಿಕ್ರಮಣ ಪಂಜಿ' ಅಥವಾ ಅತಿಕ್ರಮಣ ರಿಜಿಸ್ಟರ್ ಅನ್ನು ಸಹ ಕಂದಾಯ ಇಲಾಖೆಯು ಈಗ ನಿಯಮಿತವಾಗಿ ನವೀಕರಿಸುತ್ತಿಲ್ಲ ಎಂದಿದ್ದಾರೆ ಅವರು. ಕಂದಾಯ ನಿಯಮಗಳ ಪ್ರಕಾರ, ಈ ರಿಜಿಸ್ಟರ್ ಅನ್ನು ನವೀಕರಿಸುವುದರಿಂದ ಸಾಮಾನ್ಯವಾಗಿ ಸಾಗುವಳಿ ಅಥವಾ ಇತರ ಭೂ ಬಳಕೆಯ ದಾಖಲೆಗಳ ಕ್ರಮಬದ್ಧಗೊಳಿಸುವಿಕೆಗೆ ದಾರಿ ಮಾಡಿಕೊಡುತ್ತದೆ.

ಭೂ ದಾಖಲೆಗಳನ್ನು ಪಡೆಯುವುದು ಸುಲಭವಾಯಿತಾದರೂ, ಡಿಜಿಟಲೀಕರಣವು ಹಳೆಯ ತಪ್ಪುಗಳನ್ನೂ ಹಾಗೆಯೇ ಮುಂದುವರಿಸಿಕೊಂಡು ಬಂದಿದೆ ಎಂದು ದತ್ತಾಂಶ ಸಂಶೋಧನಾ ಸಂಸ್ಥೆಯಾದ 'ಲ್ಯಾಂಡ್ ಕಾನ್ಫ್ಲಿಕ್ಟ್ ವಾಚ್'ನ ಸಂಸ್ಥಾಪಕ ಕುಮಾರ್ ಸಂಭವ್ ಶ್ರೀವಾಸ್ತವ ಹೇಳಿದರು.

ಭೂ ದಾಖಲೆಗಳನ್ನು ತಹಸಿಲ್ ಮತ್ತು ಬ್ಲಾಕ್ ಮಟ್ಟದಲ್ಲಿ ನಿರ್ವಹಿಸಲಾಗುತ್ತದೆ . ಕಾಗದದ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ವರ್ಗಾಯಿಸುವಾಗ, ಸರಿಯಾದ ಪರಿಶೀಲನೆ ಇಲ್ಲದೆಯೇ ಅವುಗಳನ್ನು ಅಪ್‌ಲೋಡ್ ಮಾಡಲಾಗಿದೆ. ಪರಿಣಾಮವಾಗಿ, ಮೂಲ ದಾಖಲೆಗಳಲ್ಲಿದ್ದ ತಪ್ಪುಗಳು ಅಥವಾ ವ್ಯತ್ಯಾಸಗಳು ಡಿಜಿಟಲ್ ಡೇಟಾಬೇಸ್‌ನಲ್ಲೂ ಮುಂದುವರೆದಿವೆ.

'ಜಾಗೃತ್ ಆದಿವಾಸಿ ದಲಿತ ಸಂಘಟನೆ'ಯ ಸದಸ್ಯರೂ ಆಗಿರುವ ಕಾರ್ಯಕರ್ತ ನಿತಿನ್ ಮಾತನಾಡಿ, ರೈತರಿಗೆ 'ಎಂಪಿ ಭುಲೇಖ್' ಪೋರ್ಟಲ್‌ನಲ್ಲಿ ಭೂ ದಾಖಲೆಗಳನ್ನು ಪರಿಶೀಲಿಸುವುದು ಕಷ್ಟಕರವಾಗಿದೆ ಎಂದರು.

ಈ ಪೋರ್ಟಲ್ ಮೊಬೈಲ್ ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಇದನ್ನು ಬಳಸಲು ಡಿಜಿಟಲ್ ಸಾಕ್ಷರತೆ ಮತ್ತು ಸ್ಥಿರವಾದ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ, ಆದರೆ ದಗಡ್‌ಖೇಡಿಯ ಬಹುತೇಕ ರೈತರಲ್ಲಿ ಇದು ಇಲ್ಲ ಎಂದು ಅವರು ಹೇಳಿದರು. ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಬಳಸಿದಾಗಲೂ ಈ ಪೋರ್ಟಲ್ ಅನ್ನು ಪ್ರವೇಶಿಸಲು ಹಲವು ಬಾರಿ ತಮಗೂ ತೊಂದರೆಯಾಗಿತ್ತು ಎಂದು scroll.in ವರದಿ ಉಲ್ಲೇಖಿಸಿದೆ.

ಭೂ ದಾಖಲೆಗಳನ್ನು ನಿರ್ವಹಿಸುವ ಮತ್ತು ನವೀಕರಿಸುವ ಜವಾಬ್ದಾರಿ ಕಂದಾಯ ಇಲಾಖೆಯ ಮೇಲಿದೆಯೇ ಹೊರತು ಆದಿವಾಸಿ ಸಮುದಾಯದ ಮೇಲಲ್ಲ ಎಂದು ಕಾರ್ಯಕರ್ತೆ ಮಾಧುರಿ ಹೇಳಿದರು.

"ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದರೆ, ಸರ್ಕಾರವು 1970 ಮತ್ತು 1980 ರ ದಶಕದ ಖಸ್ರಾ ರಿಜಿಸ್ಟರ್‌ಗಳು ಮತ್ತು ಇತರ ಕಂದಾಯ ದಾಖಲೆಗಳನ್ನು ಒದಗಿಸಿ, ದಾಖಲೆಯಲ್ಲಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಅವರು ಹೇಳಿದರು. "ಒಂದು ವೇಳೆ ದಾಖಲೆಗಳು ಸರಿಯಿಲ್ಲದಿದ್ದರೆ, ಗ್ರಾಮ ಸಭೆಯೊಂದಿಗೆ ಸಮಾಲೋಚಿಸಿ ಹೊಸದಾಗಿ ಸ್ಥಳ ಪರಿಶೀಲನೆ ಮತ್ತು ಸಮೀಕ್ಷೆಯನ್ನು ನಡೆಸಬೇಕು" ಎಂದರು.

Photo Credit ; scroll.in

►ಆರ್ಥಿಕ ನಷ್ಟ

ದಗಡ್‌ಖೇಡಿಯ ರೈತರ ಪಾಲಿಗೆ ಈ ನಾಪತ್ತೆಯಾಗಿರುವ ಭೂ ದಾಖಲೆಗಳು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿವೆ. 45 ವರ್ಷದ ನಾನ್ ಭೈಯಾ ನರ್ಲಾ ಅವರ ಕುಟುಂಬವು ದಗಡ್‌ಖೇಡಿಯಲ್ಲಿ ಮೂರು ತಲೆಮಾರುಗಳಿಂದ ಬೇಸಾಯ ಮಾಡುತ್ತಿದೆ. ಅವರು ಒಂಬತ್ತು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ, ಆದರೆ ಕುಟುಂಬದ ಬಳಿ ಇರುವುದು ಕೇವಲ ನಾಲ್ಕು ಎಕರೆಗೆ ಸಂಬಂಧಿಸಿದ ದಾಖಲೆಗಳು ಮಾತ್ರ.

ಮುಕ್ತ ಮಾರುಕಟ್ಟೆಯಲ್ಲಿ ಒಂದು ಕೆಜಿ ಮೆಕ್ಕೆಜೋಳದ ಬಿತ್ತನೆ ಬೀಜದ ಬೆಲೆ 1,600 ರೂಪಾಯಿ. ನರ್ಲಾ ಅವರು ಸರ್ಕಾರದ ಬೀಜ ಸಹಾಯಧನವನ್ನು ಪಡೆಯಲು ಸಾಧ್ಯವಾಗಿದ್ದರೆ, ಇದೇ ಬೀಜಕ್ಕೆ 600 ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ ರಾಜ್ಯದ ಡಿಜಿಟಲ್ ಭೂ ದಾಖಲೆಗಳಲ್ಲಿ ಅವರ ಹೆಸರು ಸರಿಯಾಗಿ ನಮೂದಾಗದ ಕಾರಣ ಅವರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಅದೇ ರೀತಿ, ಮೆಕ್ಕೆಜೋಳಕ್ಕೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,410 ರೂಪಾಯಿ ಇದೆ. ಆದರೆ ನರ್ಲಾ ಅವರು ತಮ್ಮ ಕಳೆದ ಬಾರಿಯ ಮೆಕ್ಕೆಜೋಳದ ಇಳುವರಿಯನ್ನು ಹತ್ತಿರದ ಮಂಡಿಯಲ್ಲಿ ಕ್ವಿಂಟಾಲ್‌ಗೆ ಕೇವಲ 1,500 ರಿಂದ 1,600 ರೂಪಾಯಿಗೆ ಮಾರಾಟ ಮಾಡಬೇಕಾಯಿತು.

ರಾಜ್ಯದ ಡಿಜಿಟಲ್ ಭೂ ದಾಖಲೆಗಳಲ್ಲಿ ಸರಿಯಾದ ಖಸ್ರಾ ನಮೂದು ಇರುವುದು ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಅಥವಾ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡುವ ವಾರ್ಷಿಕ 6,000 ರೂಪಾಯಿ ನಗದು ಪ್ರೋತ್ಸಾಹಧನವನ್ನು ಪಡೆಯಲು ಕಡ್ಡಾಯವಾಗಿದೆ ಎಂದು ಕಾರ್ಯಕರ್ತ ನಿತಿನ್ ತಿಳಿಸಿದರು.

ಈಗಾಗಲೇ ಆರ್ಥಿಕವಾಗಿ ಹಿಂದುಳಿದಿರುವ ಆದಿವಾಸಿ ಸಮುದಾಯಕ್ಕೆ, ಇಂತಹ ನೇರ ನಗದು ವರ್ಗಾವಣೆ ಯೋಜನೆಗಳು ಮತ್ತು ಕೃಷಿ ಸಹಾಯಧನಗಳಿಂದ ವಂಚಿತರಾಗುತ್ತಿರುವುದು ಭಾರೀ ಪೆಟ್ಟು ನೀಡಿದೆ. ಬಹುತೇಕ ಸಣ್ಣ ರೈತರು ಸಣ್ಣ ಮತ್ತು ವಿಭಜಿತ ಜಮೀನುಗಳಲ್ಲಿ ಬೇಸಾಯ ಮಾಡುವುದರಿಂದ, ಸಣ್ಣ ಪ್ರಮಾಣದ ನಷ್ಟವೂ ಅವರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ

ಉತ್ತಮ ಮುಂಗಾರು ಮಳೆಯಾದ ವರ್ಷದಲ್ಲಿ ನರ್ಲಾ ಅವರ ಕುಟುಂಬ ಸುಮಾರು 1.5 ಲಕ್ಷ ರೂಪಾಯಿ ಆದಾಯ ಗಳಿಸುತ್ತದೆ. ಅದೇ ಮಳೆ ಕೈಕೊಟ್ಟ ವರ್ಷದಲ್ಲಿ ನಷ್ಟವು 70,000 ದಿಂದ 80,000 ರೂಪಾಯಿವರೆಗೂ ತಲುಪಬಹುದು. ರೈತ ಕುಟುಂಬಗಳು ದೊಡ್ಡ ಮಟ್ಟದ ಬೆಳೆ ನಷ್ಟವನ್ನು ಎದುರಿಸಿದಾಗಲೆಲ್ಲಾ, ಆ ನಷ್ಟವನ್ನು ಸರಿದೂಗಿಸಲು ಕುಟುಂಬದ ಸದಸ್ಯರು ದಿನಗೂಲಿ ಕೆಲಸಕ್ಕಾಗಿ ನೆರೆಯ ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ ಎಂದು ನರ್ಲಾ ಹೇಳಿದರು.

"ಜೋ ಹೈ ಉಸ್ಸೇ ಜೋಡ್ ಕೇ ಹಮ್ ಅಪ್ನೇ ಬಚ್ಚೋಂ ಕೋ ಖಿಲಾ ರಹೇ ಹೈ" ("ನಮ್ಮ ಬಳಿ ಏನೇನಿದೆಯೋ ಅದನ್ನೆಲ್ಲಾ ಹೇಗೋ ಕಷ್ಟಪಟ್ಟು ಒಟ್ಟುಗೂಡಿಸಿ ನಮ್ಮ ಮಕ್ಕಳಿಗೆ ತುತ್ತು ಅನ್ನ ನೀಡುತ್ತಿದ್ದೇವೆ) ಎಂದು ನರ್ಲಾ ಅಳಲು ತೋಡಿಕೊಂಡರು.

Photo Credit : scroll.in

►ಪರಿಹಾರದ ಹಾದಿ

ಭೂ ದಾಖಲೆಗಳ ಈ ಗೊಂದಲಕ್ಕೆ ಖಾರ್ಗೋನ್‌ ಜಿಲ್ಲಾ ಆಡಳಿತವು ಒಂದು ಪರಿಹಾರವನ್ನು ಸೂಚಿಸಿದೆ. ಆದಿವಾಸಿ ಸಾಗುವಳಿದಾರರು ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಗಳನ್ನು ಕೋರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ದಗಡ್‌ಖೇಡಿಯ ನಿವಾಸಿ ಶಿವರಾಮ್ ಕನ್ಸೆ ಹೇಳಿದರು.

ಈ ಪ್ರಕ್ರಿಯೆಗಾಗಿ ಮೊದಲು ಭೂಮಿಯನ್ನು ಅರಣ್ಯ ಭೂಮಿ ಎಂದು ವರ್ಗೀಕರಿಸಬೇಕು ಮತ್ತು ನಂತರ ಅದನ್ನು ಮತ್ತೆ ಕಂದಾಯ ಭೂಮಿಯಾಗಿ ಪರಿವರ್ತಿಸಬೇಕಾಗುತ್ತದೆ. ಆಗ ರೈತರು ತಮ್ಮ ಹಕ್ಕುಗಳನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಾಗುತ್ತದೆ. ಆದರೆ, ಪರಿಶಿಷ್ಟ ಪ್ರದೇಶಗಳ ಪಂಚಾಯತ್‌ಗಳ ವಿಸ್ತರಣೆ ಕಾಯ್ದೆಯ (PESA) ನಿಯಮ 17ರ ಅಡಿಯಲ್ಲಿ, ದಗಡ್‌ಖೇಡಿ ಗ್ರಾಮ ಸಭೆಯು ಪ್ರಸ್ತುತ ಇರುವ ಭೂ ದಾಖಲೆಗಳ ತಿದ್ದುಪಡಿಗೆ ನೇರವಾಗಿ ಶಿಫಾರಸು ಮಾಡಬಹುದು ಎಂದು ಕಾರ್ಯಕರ್ತ ನಿತಿನ್ ಅಭಿಪ್ರಾಯಪಟ್ಟಿದ್ದಾರೆ.

ದಗಡ್‌ಖೇಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ಇಂತಹದ್ದೇ ಸಮಸ್ಯೆಗಳಿವೆ ಎಂದು ಇಲ್ಲಿನ ರೈತರು ಹೇಳುತ್ತಾರೆ. ಒಂದು ಅಥವಾ ಇಬ್ಬರು ವ್ಯಕ್ತಿಗಳು ಒಂಟಿಯಾಗಿ ಹೋಗಿ ದೂರು ನೀಡಿದರೆ ಅಧಿಕಾರಿಗಳು ಅವರ ಮಾತುಗಳಿಗೆ ಗಮನ ಕೊಡುವುದಿಲ್ಲ .ಆದರೆ ಅವರ ಪರವಾಗಿ ಕೆಲಸ ಮಾಡಿದ್ದು ಸಮುದಾಯದ ಒಗ್ಗಟ್ಟು ಅಂತಾರೆ ಕನ್ಸೆ. ಪ್ರಸ್ತಾವಿತ ಕೈಗಾರಿಕಾ ಯೋಜನೆಯನ್ನು ಉಲ್ಲೇಖಿಸಿ ಮಾತನಾಡಿದ ಕನ್ಸೆ, "ನಾವು ತಹಸಿಲ್ ಕಚೇರಿಯನ್ನು ಬಿಟ್ಟು ಕದಲಲು ನಿರಾಕರಿಸಿದ ಕಾರಣಕ್ಕಾಗಿಯೇ ಅವರು ಯೋಜನೆಯನ್ನು ಸ್ಥಗಿತಗೊಳಿಸಲು ಮತ್ತು ಸಮೀಕ್ಷೆಗೆ ಆದೇಶಿಸಲು ಒಪ್ಪಿಕೊಂಡರು" ಎಂದರು.

ರೈತರು ಈಗ ತಾವು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಹೊಲಗಳಲ್ಲಿ ಬಿತ್ತನೆ ಹಂಗಾಮಿಗಾಗಿ ತಯಾರಿ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries