ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷ ಇತಿಹಾಸವಿರುವ ಗುರುದ್ವಾರವನ್ನು ಸ್ಥಳೀಯ ಉದ್ಯಮಿ ಧ್ವಂಸಗೊಳಿಸಿರುವುದು ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಫಾರೂಕಾಬಾದ್‌ನಲ್ಲಿರುವ 'ಗುರು ಸಿಂಗ್ ಸಭಾ ಸಾಹಿಬ್' ಗುರುದ್ವಾರ ಧ್ವಂಸ ಮಾಡಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದು ಸಿಖ್ ಧರ್ಮದ ಮೇಲಿನ ಉದ್ದೇಶಪೂರ್ವಕ ದಾಳಿ ಎಂದು ಹೇಳಿದೆ.
ಪಾಕಿಸ್ತಾನದ ಅಧಿಕಾರಿಗಳ ಪ್ರಕಾರ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಜೂನ್ 24ರ ರಾತ್ರಿ ಈ ಗುರುದ್ವಾರವನ್ನು ನೆಲಸಮಗೊಳಿಸಲಾಗಿದೆ ಎಂದು ವರದಿಯಾಗಿದೆ.
ತನಿಖೆಗೆ ಭಾರತ ಆಗ್ರಹ: ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಘಟನೆ ಬಗ್ಗೆ ತಕ್ಷಣ ತನಿಖೆ ನಡೆಸಿ ಧ್ವಂಸಗೊಂಡಿರುವ ಗುರುದ್ವಾರವನ್ನು ಪುನರ್ನಿರ್ಮಿಸಿಕೊಡುವಂತೆ ಪಾಕಿಸ್ತಾನವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಅವರ ಧಾರ್ಮಿಕ ಸ್ಥಳಗಳ ರಕ್ಷಣೆ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸುವ ತನ್ನ ಜವಾಬ್ದಾರಿಯನ್ನು ಪಾಕಿಸ್ತಾನ ಸರ್ಕಾರ ನಿಭಾಯಿಸಬೇಕು. ಕೋಮು ಹಿಂಸಾಚಾರ ಮತ್ತು ಧಾರ್ಮಿಕ ಅಸಹಿಷ್ಣುತೆಯ ವಾತಾವರಣವನ್ನು ಹೋಗಲಾಡಿಸಬೇಕು ಎಂದು ಭಾರತ ಸರ್ಕಾರ ಪಾಕಿಸ್ತಾನವನ್ನು ಆಗ್ರಹಿಸಿದೆ.

