ನವದೆಹಲಿ: ಕೃಷಿ ಚಟುವಟಿಕೆಗಳಿಂದ ಕೃಷಿಕರು ಪಡೆಯುವ ನೈಜ ಆದಾಯದ ಪುರಾವೆಗಳು ಲಭ್ಯವಿರದಿದ್ದರೆ, ಕೃಷಿಕರನ್ನು ಕಾರ್ಮಿಕರೆಂದು ಪರಿಗಣಿಸಿ ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಹಾರ ವಿತರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ತೊಂದರೆ ಅನುಭವಿಸುತ್ತಿದ್ದ ಸಾವಿರಾರು ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಈ ತೀರ್ಪು ವರದಾನವಾಗಿದೆ.
'ಹೆಚ್ಚಿನ ಕೃಷಿ ಆದಾಯ ಹೊಂದಿರುವ ಕುರಿತು ಸೂಕ್ತ ಆಧಾರ ಗಳಿಲ್ಲದೇ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ. ನ್ಯಾಯ ಮಂಡಳಿಗಳು ಕಾರ್ಮಿಕರ ಅಂದಾಜು ಗಳಿಕೆಯ ಮಾನದಂಡವನ್ನು ಅಳವಡಿಸಿ ಕೊಳ್ಳಬೇಕು' ಎಂದು ನ್ಯಾಯಮೂರ್ತಿ ಎನ್.ಕೋಟಿಶ್ವರ್ ಸಿಂಗ್, ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು ತಿಳಿಸಿದೆ.
ಮೋಟಾರು ಸೈಕಲ್‌ಗೆ ಕಾರು ಡಿಕ್ಕಿ ಹೊಡೆದು ಶೇ 78ರಷ್ಟು ಶಾಶ್ವತವಾದ ಅಂಗವೈಕಲ್ಯಕ್ಕೆ ಒಳಗಾದ ಕೃಷಿಕರೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ನ್ಯಾಯಾಲಯವು ಈ ತೀರ್ಪು ನೀಡಿದೆ.
ಕೃಷಿ ಭೂಮಿಯ ಒಡೆತನ ಹೊಂದಿದ್ದು, ಮಾಸಿಕ ₹10 ಸಾವಿರ ಆದಾಯ ಪಡೆಯುತ್ತಿರುವುದಾಗಿ ಅರ್ಜಿದಾರ ಜಗದೀಶ್ ನಾರಾಯಣ್ ಅವರು ಪ್ರತಿಪಾದಿಸಿದ್ದರು. ಈ ವಾದವನ್ನು ಮೋಟಾರು ಅಪಘಾತ ಪರಿಹಾರ ಮಂಡಳಿ (ಎಂಎಸಿಟಿ) ತಿರಸ್ಕರಿಸಿತ್ತು.
ಅರ್ಜಿದಾರರನ್ನು ಕೃಷಿ ಕಾರ್ಮಿಕರೆಂದು ಪರಿಗಣಿಸಿದ್ದ ಎಂಎಸಿಟಿ, ಮಾಸಿಕ ₹3 ಸಾವಿರದಂತೆ ಕೂಲಿಯನ್ನು ನಿಗದಿಪಡಿಸಿ, ಒಟ್ಟು ₹4 ಲಕ್ಷ ಪರಿಹಾರ ಘೋಷಿಸಿತ್ತು. ಅಪಘಾತದಲ್ಲಿ ಬೈಕ್ ಸವಾರನದ್ದು ಕೂಡ ನಿರ್ಲಕ್ಷ್ಯ ಕಂಡುಬಂದಿದ್ದರಿಂದ ಪರಿಹಾರ ಮೊತ್ತವನ್ನು ಅರ್ಧಕ್ಕೆ ಕಡಿತ ಗೊಳಿಸಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿದ್ದ ಹೈಕೋರ್ಟ್, ವಿವಿಧ ಪರಿಹಾರದ ಅಡಿಯಲ್ಲಿ ಒಟ್ಟು ಮೊತ್ತವನ್ನು ₹8,90,683ಕ್ಕೆ ಏರಿಕೆ ಮಾಡಿತ್ತು.
ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ, ರಾಮಚಂದ್ರಪ್ಪ ವರ್ಸಸ್ ರಾಯಲ್ ಸುಂದರಂ ಅಲಯನ್ಸ್ ಇನ್ಷೂರೆನ್ಸ್ ಲಿಮಿಟೆಡ್ (2011)ರಲ್ಲಿ ನೀಡಿದ್ದ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, 2004ರಲ್ಲಿ ಅರ್ಜಿದಾರರು ಮಾಸಿಕ ₹4,500 ಕೂಲಿ ಪಡೆದಿದ್ದರೆ, ವಾರ್ಷಿಕ ಕೂಲಿ ಹೆಚ್ಚಳವನ್ನು ಪರಿಗಣಿಸಿದರೆ, 2011ರ ವೇಳೆಗೆ ₹8 ಸಾವಿರ ತಲುಪುತ್ತಿತ್ತು. ಅಂಗವಿಕಲತೆಯಿಂದ ಉಂಟಾದ ನಷ್ಟದ ಆದಾಯವನ್ನು ಪರಿಗಣಿಸಿ, ಅರ್ಜಿದಾರರಿಗೆ ₹7,41,312 ಮರು ಲೆಕ್ಕಾಚಾರ ಮಾಡಿ, ಸುಪ್ರೀಂಕೋರ್ಟ್ ಪರಿಹಾರ ನಿಗದಿಪಡಿಸಿದೆ.

