ನವದೆಹಲಿ: ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರು ಟೀಕಾಕಾರರಿಗೆ ಮಾರ್ಮಿಕ ಉತ್ತರ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡ ಅವರು, 'ಕೆಲವೊಮ್ಮೆ ಜನರು ನನ್ನನ್ನು ಕೇಳುತ್ತಾರೆ, ನೀವು ಕೆಲವು ವಿಷಯಗಳ ಬಗ್ಗೆ ಇಷ್ಟೊಂದು ನಿರ್ಭಯವಾಗಿ ಹೇಗೆ ಮಾತನಾಡುತ್ತೀರಿ?
ಇದರಿಂದ ಜನಪ್ರಿಯತೆ ಕಡಿಮೆಯಾಗುತ್ತದೆ ಎಂಬ ಭಯ ನಿಮಗಿಲ್ಲವೇ?' ಎಂದು. ಅದಕ್ಕೆ ನನ್ನ ನೇರ ಉತ್ತರ ಏನೆಂದರೆ, ಬಹುಶಃ ನಾನು ಜಗತ್ತಿನಲ್ಲಿ ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವುದಿಲ್ಲ' ಎಂದು ಹೇಳಿದ್ದಾರೆ.
'ಜೀವನದಲ್ಲಿ ಪ್ರತಿಯೊಬ್ಬರನ್ನೂ ಸಂತೋಷವಾಗಿಡುವುದು ಅತ್ಯಂತ ಕಷ್ಟದ ಕೆಲಸ ಮತ್ತು ಈ ಜಗತ್ತಿನಲ್ಲಿ ಎಲ್ಲರನ್ನೂ ಮೆಚ್ಚಿಸಿದ ಒಬ್ಬನೇ ಒಬ್ಬ ವ್ಯಕ್ತಿಯೂ ಇಲ್ಲ' ಎಂದು ವಿಡಿಯೊದಲ್ಲಿ ಅನುಪಮ್ ಖೇರ್ ಪ್ರತಿಪಾದಿಸಿದ್ದಾರೆ.
'ಯಾವಾಗ ಒಬ್ಬ ವ್ಯಕ್ತಿ ತಾನು ಎಲ್ಲರಿಗೂ ಇಷ್ಟವಾದವನಾಗಬೇಕು ಎಂದು ನಿರ್ಧರಿಸುತ್ತಾನೋ, ಆಗ ಜನರು ಆತನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ನನ್ನ ಜೀವನದಲ್ಲಿ ಒಂದು ತತ್ವವಿದೆ. ಮೊದಲು ನಿಮ್ಮ ಪಾಲಿಗೆ ನೀವೇ ಅತ್ಯಂತ ನೆಚ್ಚಿನವರಾಗಿ. ಪ್ರತಿದಿನ ಬೆಳಿಗ್ಗೆ ಕನ್ನಡಿಯ ಮುಂದೆ ನಿಂತಾಗ, ನಾನು ಒಬ್ಬ ಒಳ್ಳೆಯ ಮನುಷ್ಯ ಎಂದು ನಿಮಗೆ ನೀವೇ ಹೇಳಿಕೊಳ್ಳುವಂತಿರಬೇಕು. ಒಂದು ವೇಳೆ ಯಾವುದಾದರೂ ತಪ್ಪು ಅನಿಸಿದರೆ ಅದನ್ನು ಬದಲಾಯಿಸಿಕೊಳ್ಳಿ. ಆ ಬದಲಾವಣೆ ನಿಮಗಾಗಿ ಇರಬೇಕೇ ಹೊರತು ಜಗತ್ತಿಗಾಗಿ ಅಲ್ಲ' ಎಂದು ಹೇಳಿದ್ದಾರೆ.
'ನಿಮ್ಮ ಪೋಷಕರು, ಒಡಹುಟ್ಟಿದವರು ಮತ್ತು ಆಪ್ತ ಗೆಳೆಯರು ನಿಮ್ಮನ್ನು ಪ್ರೀತಿಸಿದರೆ, ಜನಪ್ರಿಯತೆಯ ಪ್ರಮಾಣಪತ್ರ ಈಗಾಗಲೇ ನಿಮ್ಮ ಕೈಯಲ್ಲಿದೆ ಎಂದರ್ಥ. ಉಳಿದ ಯಾವುದೂ ಮುಖ್ಯವಲ್ಲ. ನಿಮ್ಮಲ್ಲಿರುವ ಅತ್ಯುತ್ತಮ ವಿಷಯವೆಂದರೆ ಅದು ನೀವೇ ಎಂಬುದನ್ನು ನೆನಪಿಡಿ' ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ವಿವಾದದ ಹಿನ್ನೆಲೆ ಏನು?
ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನುಪಮ್ ಖೇರ್, ರಾಮಮಂದಿರದ ದೇಣಿಗೆ ಕಳ್ಳತನ ಮತ್ತು ಹಣಕಾಸಿನ ಅಕ್ರಮಗಳ ಆರೋಪವನ್ನು ಸಣ್ಣ ವಿಷಯ ಎಂದು ಕರೆದಿದ್ದರು. ಅಲ್ಲದೆ, ಈ ವಿಷಯವನ್ನು ವಿಪರೀತವಾಗಿ ದೊಡ್ಡದು ಮಾಡಲಾಗುತ್ತಿದೆ ಎಂದು ಆರೋಪಿಸಿ ಅಕ್ರಮದ ಆರೋಪ ಎದುರಿಸುತ್ತಿರುವವರನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 'ಇದು ವಿಚಿತ್ರವಾದ ವಾದ. ಕಳ್ಳನಿಗೆ ಯಾರೂ ಏನೂ ಅನ್ನಬಾರದು, ಆದರೆ ಕಳ್ಳತನವನ್ನು ಹಿಡಿದವರಿಗೆ ಬುದ್ಧಿವಾದ ಹೇಳಬೇಕು. ಕಳ್ಳರ ಮೇಲಿನ ಇಂತಹ ಸಹಾನುಭೂತಿಗೆ ಏನಾದರೂ ಬಲವಾದ ಕಾರಣ ಇರಬೇಕು ಅಥವಾ ಯಾವುದಾದರೂ ರಾಜಕೀಯ ಅನಿವಾರ್ಯತೆ ಇರಬೇಕು' ಎಂದು ಖೇರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅಖಿಲೇಶ್ ಯಾದವ್ ಅವರ ಪೋಸ್ಟ್ಗೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಅನುಪಮ್ ಖೇರ್, 'ನಿಮ್ಮಂತಹ ದೊಡ್ಡ ನಾಯಕರು ನನ್ನ ಬಗ್ಗೆ ಬರೆಯುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಬಹುಶಃ ನಿಮ್ಮ ತಂಡದವರು ನನ್ನ ಹೇಳಿಕೆಯ ಕೇವಲ ಅರ್ಧ ಭಾಗವನ್ನು ಮಾತ್ರ ನಿಮಗೆ ತೋರಿಸಿ ಹಾದಿ ತಪ್ಪಿಸಿದ್ದಾರೆ. ಇಂತಹ ಸಣ್ಣಪುಟ್ಟ ಕಳ್ಳತನಗಳಿಂದ ಭಗವಾನ್ ಶ್ರೀರಾಮನ ಕೀರ್ತಿಗೆ ಯಾವುದೇ ಧಕ್ಕೆ ತರಲು ಸಾಧ್ಯವಿಲ್ಲ ಎಂಬುದು ನಿಮಗೂ ತಿಳಿದಿರುತ್ತದೆ' ಎಂದು ತಿರುಗೇಟು ನೀಡಿದ್ದರು.
ಸದ್ಯ ಈ ವಿವಾದಗಳ ನಡುವೆಯೇ ಅನುಪಮ್ ಖೇರ್ ಅವರು ತಮ್ಮ ಮುಂದಿನ 'ಶ್ರೀ ರಾಮಭೂಮಿ' ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಘೋಷಣೆಯನ್ನು ಅವರು ಕಳೆದ ಮೇ ತಿಂಗಳಲ್ಲೇ ಮಾಡಿದ್ದರು. 'ದಿ ಕೇರಳ ಸ್ಟೋರಿ 2' ಚಿತ್ರದ ನಿರ್ದೇಶಕ ಕಾಮಾಖ್ಯ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಿತ್ವಿಕ್ ಭೌಮಿಕ್ ಮತ್ತು ಅಮೃತಾ ಖಾನ್ವಿಲ್ಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

