ವಾಷಿಂಗ್ಟನ್ : ಅಮೆರಿಕದ ಕಾನ್ಸಾಸ್ ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕಾರೊಂದು ಕೊಚ್ಚಿ ಹೋಗಿ 33 ವರ್ಷದ ಭಾರತೀಯ ಮೂಲದ ಟೆಕ್ಕಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಮೂಲದ ವೆಂಕಟೇಶ್ ಡೊಪ್ಪಲಪುಡಿ ಮೃತರು. ಇವರು H-1B ವೀಸಾ ಹೊಂದಿದ್ದು, ನೆಬ್ರಾಸ್ಕಾದ ಒಮಾಹಾದಲ್ಲಿ ವಾಸಿಸುತ್ತಿದ್ದರು.
ಶನಿವಾರ ಮಧ್ಯಾಹ್ನ ಹ್ಯೂಸ್ಟನ್‌ನಿಂದ ಹಿಂದಿರುಗುತ್ತಿದ್ದ ವೇಳೆ ವೆಂಕಟೇಶ್ ಅವರ ಕಾರು ಕಾನ್ಸಾಸ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಆರಂಭದಲ್ಲಿ, ಪ್ರವಾಹದಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಬಳಿಕ ಡ್ರೋನ್‌ಗಳು ಸೇರಿದಂತೆ ವ್ಯಾಪಕವಾದ ಹುಡುಕಾಟದ ಬಳಿಕ ದೊಪ್ಪಲಪುಡಿ ಅವರ ಮೃತದೇಹ ಪತ್ತೆಯಾಗಿದೆ.
ಘಟನೆ ಕುರಿತು ಭಾರತೀಯ ದೂತವಾಸ ಸಂತಾಪವನ್ನು ಸೂಚಿಸಿದೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದೆ.

