ವಾಷಿಂಗ್ಟನ್: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಸತ್‌ಗೆ (ಕಾಂಗ್ರೆಸ್) ಅಧಿಕೃತವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜುಲೈ 10ರಂದು ಸೆನೆಟ್ ಅಧ್ಯಕ್ಷ ಚಕ್ ಗ್ರಾಸ್ಲಿ ಅವರಿಗೆ ಟ್ರಂಪ್ ಪತ್ರ ಬರೆದಿದ್ದು, ಜುಲೈ 7ರಂದು ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ಸೇನಾ ಕಾರ್ಯಾಚರಣೆಯನ್ನು ನಾಗರಿಕ ಸಾವುನೋವು ಕಡಿಮೆ ಮಾಡುವ ರೀತಿಯಲ್ಲಿ ಕಾರ್ಯಗತಗೊಳಿಸಲಾದ ಸೀಮಿತ ಕಾರ್ಯಾಚರಣೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕದ ಸೇನೆ ಮತ್ತು ವಾಣಿಜ್ಯ ಹಡಗುಗಳಿಗೆ ಬೆದರಿಕೆಯೊಡ್ಡುವ ಇರಾನ್‌ನ ಸೇನಾ ನೆಲೆಗಳನ್ನು ಗುರಿಯಾಗಿಸುವುದು ಈ ದಾಳಿಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ-ಇರಾನ್ ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಟ್ರಂಪ್ ಈಚೆಗೆ ಘೋಷಿಸಿದ್ದರು. ಇದರ ಬೆನ್ನಲ್ಲೇ, ಇರಾನ್ ನೆಲೆಗಳ ಮೇಲೆ ಹಲವು ಸುತ್ತಿನ ದಾಳಿಗಳಿಗೆ ಆದೇಶಿಸಿದ ನಂತರ ಈ ಅಧಿಸೂಚನೆ ಹೊರಬಿದ್ದಿದೆ.
ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಅನುಮೋದಿಸಿದ ಮಾರ್ಗವನ್ನೇ ಬಳಸಬೇಕು ಎಂದು ಇರಾನ್ ವಾದಿಸುತ್ತಿದೆ. ಅಲ್ಲದೆ, ದಾಳಿಗೆ ಪ್ರತಿಯಾಗಿ ಅಮೆರಿಕ ಮಿತ್ರರಾಷ್ಟ್ರಗಳಾದ ಗಲ್ಫ್ ದೇಶಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು.
1973ರ 'ಯುದ್ಧಾಧಿಕಾರ ನಿರ್ಣಯ'ದ ಪ್ರಕಾರ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ನಿಯಮದಡಿ, ಸೇನಾ ಕಾರ್ಯಾಚರಣೆ ಪ್ರಾರಂಭವಾದ 48 ಗಂಟೆಗಳ ಒಳಗೆ ಅಮೆರಿಕ ಅಧ್ಯಕ್ಷರು ಸಂಸತ್‌ಗೆ ತಿಳಿಸುವುದು ಕಡ್ಡಾಯವಾಗಿದೆ.
ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಬಳಿಕ ಏಪ್ರಿಲ್‌ನಲ್ಲಿ ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಈಚೆಗೆ ತಿಳಿವಳಿಕೆ ಒಪ್ಪಂದ ಕೊನೆಗೊಂಡಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಟ್ರಂಪ್ ಪ್ರಕಟಿಸಿದ್ದರು.

