ಉನ್ನಾವ್: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಲೂಟಿ ಮಾಡಿದವರಿಗೆ ಕ್ಯಾನ್ಸರ್ ರೋಗ ಬರಲಿದ್ದು, ನರಳಿ ನರಳಿ ಸಾಯುತ್ತಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಉನ್ನಾವ್ ಜಿಲ್ಲೆಯ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಸಿಂಗ್ ಭಾನುವಾರ ಈ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ವಿಡಿಯೊದಲ್ಲಿ ಏನಿದೆ?
'ರಾಮನ ದೇಗುಲದಿಂದ ಕಾಣಿಕೆ ಹಣ ಕದ್ದವರಿಗೆ ಕ್ಯಾನ್ಸರ್ ತಗುಲಲಿದೆ. ದೇವರೇ ಮರಣದಂಡನೆ ವಿಧಿಸಲಿದ್ದಾರೆ. ಇನ್ನೊಂದು ವರ್ಷ ಕಾಯಿರಿ, ಅವರಿಗೆಲ್ಲ ಕ್ಯಾನ್ಸರ್ ಬರಲಿದೆ' ಎಂದು ಹೇಳಿದ್ದಾರೆ.
'ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಶ್ರೀರಾಮನೇ ಅವರಿಗೆ ಶಿಕ್ಷೆ ನೀಡಲಿದ್ದಾರೆ. ನೋವಿನಿಂದ ಕೂಡಿದ ಸಾವು ಎದುರಾಗಲಿದೆ. ಮಂದಿರದ ಹಣ ಕದ್ದರೆ ಏನಾಗಲಿದೆ ಎಂದು ಮುಂದಿನ ಏಳು ತಲೆಮಾರುಗಳು ನೆನಪಿಸಿಕೊಳ್ಳುತ್ತವೆ' ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣವು ಉತ್ತರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಟ್ರಸ್ಟ್ ನೀಡಿದ ದೂರಿನನ್ವಯ ಉತ್ತರ ಪ್ರದೇಶದ ಸರ್ಕಾರವು ಜೂನ್ 13ರಂದು ಹಗರಣ ಸಂಬಂಧ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು. ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

