HEALTH TIPS

ಸಾವರ್ಕರ್ ಬಿಡುಗಡೆಗೆ ಕ್ಷಮಾದಾನ ಅರ್ಜಿಗಳಲ್ಲ, ರಾಜಕೀಯ ಪ್ರಯತ್ನಗಳೇ ಕಾರಣ: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಹೇಳಿಕೆ

ಪುಣೆ: ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳಿಂದ ಜೈಲಿನಿಂದ ಬಿಡುಗಡೆಯಾಗಿಲ್ಲ. ಅವರ ಬಿಡುಗಡೆಗೆ ರಾಜಕೀಯ ಪ್ರಯತ್ನಗಳು ಮತ್ತು ಸಾರ್ವಜನಿಕ ಒತ್ತಡವೇ ಕಾರಣ ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ಬುಧವಾರ ಪುಣೆ ನ್ಯಾಯಾಲಯಕ್ಕೆ ತಿಳಿಸಿದರು ಎಂದು barandbench.com ವರದಿ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಅವರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮೋಲ್ ಶಿಂಧೆ ಅವರಿದ್ದ ಪೀಠದ ಮುಂದೆ ಈ ಹೇಳಿಕೆ ನೀಡಿದರು.

ರಾಹುಲ್ ಗಾಂಧಿ ಅವರು ಮಾರ್ಚ್ 2023ರಲ್ಲಿ ಲಂಡನ್‌ ನಲ್ಲಿ ಮಾಡಿದ ಭಾಷಣದಲ್ಲಿ, ಸಾವರ್ಕರ್ ಮತ್ತು ಇತರರು ಒಬ್ಬ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು ಹಾಗೂ ಆ ಘಟನೆಯನ್ನು ಸಾವರ್ಕರ್ ತಮ್ಮ ಬರಹಗಳಲ್ಲಿ ಸಮರ್ಥಿಸಿಕೊಂಡಿದ್ದರು ಎಂದು ಆರೋಪಿಸಿದ್ದರು. ಈ ಹೇಳಿಕೆಗಳು ಸುಳ್ಳು ಮತ್ತು ಮಾನಹಾನಿಕಾರಕವಾಗಿವೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ವಿಚಾರಣೆ ವೇಳೆ ಕ್ಷಮಾದಾನ ಅರ್ಜಿಗಳ ಕುರಿತು ಪ್ರತಿಕ್ರಿಯಿಸಿದ ಸತ್ಯಕಿ, "ಸಾವರ್ಕರ್ ಸಲ್ಲಿಸಿದ್ದ ಅರ್ಜಿಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗಿಲ್ಲ. 1937ರಲ್ಲಿ ನಡೆದ ರಾಜಕೀಯ ಪ್ರಯತ್ನಗಳು ಮತ್ತು ಸಾರ್ವಜನಿಕ ಒತ್ತಡದ ಪರಿಣಾಮವಾಗಿ ಅವರಿಗೆ ಬಿಡುಗಡೆ ದೊರೆಯಿತು. ಈ ಪ್ರಯತ್ನಗಳು ಕಾಂಗ್ರೆಸ್ ಆಡಳಿತದಡಿ ನಡೆದದ್ದಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಸಾವರ್ಕರ್ ರನ್ನು 1911ರಲ್ಲಿ ಅಂಡಮಾನ್‌ನ ಸೆಲ್ಯುಲಾರ್ ಜೈಲಿಗೆ ಕಳುಹಿಸಲಾಗಿತ್ತು. ಸುಮಾರು 12 ವರ್ಷಗಳ ಬಳಿಕ ಅವರನ್ನು ಭಾರತದ ಮುಖ್ಯಭೂಭಾಗದ ಜೈಲುಗಳಿಗೆ ವರ್ಗಾಯಿಸಿ, ನಂತರ ಗೃಹಬಂಧನದಲ್ಲಿ ಇರಿಸಲಾಗಿತ್ತು. 1937ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಸತ್ಯಕಿ ವಿವರಿಸಿದರು.

1923ರಲ್ಲಿ ಮೊಹಮ್ಮದ್ ಅಲಿ ಜೋಹರ್ ಅಧ್ಯಕ್ಷತೆಯಲ್ಲಿ ನಡೆದ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಸಾವರ್ಕರ್ ಬಿಡುಗಡೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಸಾವರ್ಕರ್ ಬಿಡುಗಡೆಗಾಗಿ ಸಾರ್ವಜನಿಕ ಒತ್ತಡವೂ ಹೆಚ್ಚಾಗಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಗಲ್ಲು ಶಿಕ್ಷೆಯನ್ನು ತಪ್ಪಿಸಲು ಸಹ ಇದೇ ರೀತಿಯ ರಾಜಕೀಯ ಪ್ರಯತ್ನಗಳನ್ನು ಮಾಡಬಹುದಾಗಿತ್ತು ಎಂದು ಸತ್ಯಕಿ ಅಭಿಪ್ರಾಯಪಟ್ಟರು.

ಸಾವರ್ಕರ್ ಬ್ರಿಟಿಷರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳ ಬಗ್ಗೆ ಮಾತನಾಡಿದ ಸತ್ಯಕಿ, "1913ರ ನವೆಂಬರ್ 14ರ ಅರ್ಜಿಯಲ್ಲಿ ಬ್ರಿಟಿಷ್ ಸರ್ಕಾರದ ಬಗ್ಗೆ ನಿಷ್ಠೆ ವ್ಯಕ್ತಪಡಿಸಲಾಗಿದೆ ಅಥವಾ ಬ್ರಿಟಿಷರ ಸೇವೆ ಮಾಡಲು ಇಚ್ಛೆ ವ್ಯಕ್ತಪಡಿಸಲಾಗಿದೆ ಎಂದು ನಾನು ಹೇಳಲಾರೆ" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸತ್ಯಕಿ ಸಾವರ್ಕರ್ ಅವರ ವಿಚಾರಣೆ ಜುಲೈ 7ರಂದು ಮುಂದುವರಿಯಲಿದ್ದು, ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ಅವರನ್ನು ಮತ್ತಷ್ಟು ಪ್ರಶ್ನಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries