ಕಾಸರಗೋಡು : ಬಿರುಸಿನ ಗಾಳಿಯಿಂದ ಕೂಡಿದ ಮಳೆ ಪರಿಣಾಮ ನೀಲೇಶ್ವರದ ಸನಿಹ ರೈಲ್ವೆ ಹಳಿಗೆ ಮರ ಮುರಿದು ಬಿದ್ದಿದ್ದು, ಇದರಿಂದ ಮಂಗಳೂರು ಭಾಗಕ್ಕಿರುವ ರೈಲು ಸಂಚಾರದಲ್ಲಿ ತಾಸು ಕಾಲ ವಿಳಂಬವುಂಟಾಗಿತ್ತು. ಗುರುವಾರ ಬೆಳಗ್ಗೆ ಹಳಿಯಲ್ಲಿ ಮರ ಬಿದ್ದಿರುವುದು ಕಂಡು ಬಂದಿದ್ದು, ಮಾಹಿತಿ ಪಡೆದ ಚೆರುಪತ್ತೂರಿನಲ್ಲಿರುವ ಮೈಂಟೆನೆನ್ಸ್ ನೌಕರರು ಸ್ಥಳಕ್ಕೆ ತಲುಪಿ ಮರವನ್ನು ಕಡಿದು ತೆರವುಗೊಳಿಸಿದರು. ಮರ ಬಿದ್ದ ಹಿನ್ನೆಲೆಯಲ್ಲಿ ಮಂಗಳೂರಿಗಿರುವ ಪ್ಯಾಸೆಂಜರ್ ರೈಲು, ಮಂಗಳೂರು ಎಕ್ಸ್‍ಪ್ರೆಸ್ ರೈಲನ್ನು ಚೆರುಪತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗಿತ್ತು. ರೈಲ್ವೆ ಹಳಿಯಿಂದ ಮರ ತೆರವುಗೊಳಿಸಿದ ನಂತರ ರೈಲುಗಳು ಪ್ರಯಾಣ ಮುಂದುವರಿಸಿತ್ತು.
ಬಿರುಸಿನ ಗಾಳಿ: ಮನೆಗೆ ತೆಂಗಿನ ಮರ ಬಿದ್ದು ಹಾನಿ:
ಕಾಸರಗೋಡು ರೈಲ್ವೆ ನಿಲ್ದಾಣ ಬಳಿ ಬಿರುಸಿನ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದ ತೆಂಗಿನ ಮರ ಮುರಿದು ಬಿದ್ದು ಮನೆ ಟೆರೇಸ್‍ಗೆ ಹಾನಿ ಸಂಭವಿಸಿದೆ. ರೈಲು ನಿಲ್ದಾಣ ಬಳಿಯ ಆರಣ್ಯ ಕಚೇರಿ ಸಮೀಪವಿರುವ ಬಶೀರ್ ಎಂಬವರ ಕಾಂಕ್ರೀಟ್ ಮನೆಗೆ ನಿನ್ನೆ ಮರ ತುಂಡಾಗಿ ಬಿದ್ದಿದೆ. ಮನೆಯೊಳಗಿದ್ದವರು ಅಪಾಯವಿಲ್ಲದೆ ಪಾರಾಗಿದ್ದಾರೆ.
ಈ ಮಧ್ಯೆ ಜುಲೈ 3 ಮತ್ತು 4 ರಂದು ಮತ್ತೆ ಮಳೆ ಬಿರುಸುಗೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭ ಗುಡುಗು, ಮಿಂಚು ಹಾಗೂ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

