ಮುಳ್ಳೇರಿಯ: ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ,ವಿಷ್ಣು, ಮಹೇಶ್ವರರಂತೆ ಕಾರ್ಯಾಚರಿಸುತ್ತಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ.
ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ್ ಮಹಾ ಅಭಿಯಾನ್ (ತರಬೇತಿ ಕಾರ್ಯಕ್ರಮ) ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನಸಂಘದ ಕಾಲದಿಂದಲೇ ಕಾರ್ಯಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದು ಈಗಲೂ ಮುಂದುವರಿಯುತ್ತಿದೆಯೆಂದು ಅವರು ತಿಳಿಸಿದರು. ಇಂದಿರಾಗಾಂಧಿಯವರ ಹತ್ಯೆಯ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟುಗಳು ಮಾತ್ರವೇ ಲಭಿಸಿತ್ತು. ಅನಂತರ 5 ದಿನಗಳ ಅಧ್ಯಯನ ಶಿಬಿರ ನಡೆಸಿ ಮುಂದಿನ ಚುನಾವಣೆಗಳಿಗೆ ಚಟುವಟಿಕಾ ವರದಿ ಸಿದ್ಧಪಡಿಸಲಾಯಿತು. ಆ ರೀತಿಯ ತರಬೇತಿಗಳು ಹಾಗೂ ಕಾರ್ಯಕರ್ತರ ನಿರಂತರ ಕಠಿಣ ಪ್ರಯತ್ನದ ಫಲವಾಗಿ ಇಂದು ಬಿಜೆಪಿ ಒಂದು ಹೆಮ್ಮರವಾಗಿ ಬೆಳೆದು ನಿಂತಿದೆಯೆಂದು ಅವರು ತಿಳಿಸಿದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ಮಣಿಕಂಠ ರೈ, ಸುಧಾಮ ಗೋಸಾಡ, ಶಿವಕೃಷ್ಣ ಭಟ್, ಸುಕುಮಾರ ಕುದ್ರೆಪ್ಪಾಡಿ, ಹರೀಶ್ ನಾರಂಪಾಡಿ, ಶಂಕರ ಡಿ. ಬದಿಯಡ್ಕ, ಜನನಿ ಕಾರಡ್ಕ, ಯಶೋಧಾ ಕುಂಬ್ಡಾಜೆ, ಮಾಲಿನಿ ಬೆಳ್ಳೂರು, ಅಶ್ವಿನಿ ಕೆ.ಎಂ, ವಸಂತ ಕೆ, ಮುರಳೀಧರ ಯಾದವ್ ಮೊದಲಾದವರು ಪಾಲ್ಗೊಂಡರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಸ್ವಾಗತಿಸಿ, ಕಾರ್ಯದರ್ಶಿ ಅವಿನಾಶ್ ವಿ. ರೈ ವಂದಿಸಿದರು.

.jpg)
.jpg)
