HEALTH TIPS

ಒಂದು ದೇಶ, ಒಂದು ಚುನಾವಣೆ: ಮಸೂದೆ ಗೆಲ್ಲಲು ಮೋದಿ ಸರ್ಕಾರಕ್ಕಿರುವ ಸವಾಲುಗಳೇನು?

 ನವದೆಹಲಿ: ಬರಲಿರುವ ಸಂಸತ್ತಿನ ಮುಂಗಾರು ಅಧಿವೇಶನ ದೇಶದ ರಾಜಕೀಯ ಇತಿಹಾಸ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ನೀಡಿದೆ. 


ಕ್ಷೇತ್ರ ಮರುವಿಂಗಡಣೆ ಮಸೂದೆ ಸೋಲಿನ ಬಳಿಕ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ 'ಒಂದು ದೇಶ, ಒಂದು ಚುನಾವಣೆ' (ಔಓಔಇ) ಮಸೂದೆ ಜಾರಿಗೆ ತರಲು ಮುಂದಾಗಿದೆ.

ಇದು ಕೇವಲ ಒಂದು ಮಸೂದೆಯಲ್ಲ, ದೇಶದ ಒಟ್ಟಾರೆ ಚುನಾವಣಾ ಪ್ರಕ್ರಿಯೆಯನ್ನೇ ಬದಲಾಯಿಸುವ ಬೃಹತ್ ಹೆಜ್ಜೆಯಾಗಿದ್ದು ಇದಕ್ಕೆ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಉಭಯ ಸದನಗಳಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಕ್ರೋಢೀಕರಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ತೀವ್ರ ಕಸರತ್ತು ನಡೆಸಿದೆ. ಎನ್‌ಡಿಎ ಉಭಯ ಸದನಗಳಲ್ಲಿ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಅಧಿವೇಶನದಲ್ಲೇ 'ಒಂದು ದೇಶ, ಒಂದು ಚುನಾವಣೆ' ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಜೆಪಿಸಿ ವರದಿ ಆಧಾರದ ಮೇಲೆ ಕಸರತ್ತು?

ಕಳೆದ ವರ್ಷದ ಚಳಿಗಾಲದ ಅಧಿವೇಶನದಲ್ಲಿ 'ಒಂದು ದೇಶ, ಒಂದು ಚುನಾವಣೆ' ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಇದನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಹಿಸಲಾಗಿತ್ತು. ಸಮಿತಿಯ ಅವಧಿಯು ಈ ಮುಂಗಾರು ಅಧಿವೇಶನದ ಕೊನೆಯ ವಾರದಲ್ಲಿ (ಆಗಸ್ಟ್ 10ರವರೆಗೆ) ಮುಕ್ತಾಯವಾಗಲಿದೆ.

ಒಂದು ವೇಳೆ ಸಂಸದೀಯ ಸಮಿತಿಯು ಆಗಸ್ಟ್ 10ರ ಒಳಗೆ ವರದಿ ಸಲ್ಲಿಸಿದರೆ, ಅದರ ಶಿಫಾರಸುಗಳನ್ನು ಒಳಗೊಂಡ ಪರಿಷ್ಕೃತ ಮಸೂದೆಯನ್ನು ಅಧಿವೇಶನದ ಕೊನೆಯ ನಾಲ್ಕು ದಿನಗಳಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ಸಮಿತಿಯು ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸಾರ್ವಜನಿಕರು ಮತ್ತು ರಾಜಕೀಯ, ಸಂವಿಧಾನ ತಜ್ಞರು ಹಾಗೂ ಶಾಸಕರು, ಸಂಸದರ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇತ್ತೀಚೆಗೆ ಗೋವಾ ರಾಜ್ಯಕ್ಕೆ ಭೇಟಿ ನೀಡಿದ್ದ ಜೆಪಿಸಿ ಅಧ್ಯಕ್ಷ ಪಿ.ಪಿ. ಚೌಧರಿ, 2029ರ ಲೋಕಸಭಾ ಚುನಾವಣೆಯೊಂದಿಗೆ ದೇಶದಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂಬ ಸುಳಿವು ನೀಡಿದ್ದರು.

ಮಸೂದೆಯ ನಿಯಮಾವಳಿ ಪ್ರಕಾರ, 2029ರ ಲೋಕಸಭೆ ರಚನೆಯಾದ ಬಳಿಕ ರಾಷ್ಟ್ರಪತಿಯವರು ಮೊದಲ ಅಧಿವೇಶನದಲ್ಲಿ 'ಒಂದು ದೇಶ, ಒಂದು ಚುನಾವಣೆ'ಯ ಅಧಿಕೃತ ದಿನಾಂಕದ ಅಧಿಸೂಚನೆ ಹೊರಡಿಸಲಿದ್ದಾರೆ. ಅದಾದ ಬಳಿಕ ಅವಧಿ ಮುಗಿಯುವ ವಿವಿಧ ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು 2034ರ ಲೋಕಸಭಾ ಚುನಾವಣೆಯೊಂದಿಗೆ ವಿಲೀನಗೊಳಿಸಲಾಗುತ್ತದೆ. ಉದಾಹರಣೆಗೆ, 2031ರಲ್ಲಿ ಯಾವುದೊ ಒಂದು ರಾಜ್ಯದ ವಿಧಾನಸಭೆ ಚುನಾವಣೆ ನಡೆದರೆ, ಅದರ ಅವಧಿ ಕೇವಲ 3 ವರ್ಷಕ್ಕೆ (2034ರವರೆಗೆ) ಮಾತ್ರ ಸೀಮಿತವಾಗಿರುತ್ತದೆ. ಅಂದರೆ, 2034ರಿಂದ ದೇಶಾದ್ಯಂತ 'ಒಂದು ದೇಶ, ಒಂದು ಚುನಾವಣೆ' ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸದನದಲ್ಲಿ ಬದಲಾದ ಸಂಖ್ಯಾಬಲದ ಲೆಕ್ಕಾಚಾರ...

ಇದು ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಅಂದರೆ ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (ವಿಶೇಷ ಬಹುಮತ) ಬೆಂಬಲದ ಅಗತ್ಯವಿದೆ. ಸದ್ಯದ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತವಿದೆಯಾದರೂ, ವಿಶೇಷ ಬಹುಮತಕ್ಕೆ ಬೇಕಾದ ಸುಮಾರು 360 ಸ್ಥಾನಗಳ ಮ್ಯಾಜಿಕ್ ನಂಬರ್ ಇಲ್ಲ.

2024ರ ಡಿಸೆಂಬರ್‌ನಲ್ಲಿ ಈ ಮಸೂದೆಯನ್ನು ಜೆಪಿಸಿಗೆ ಕಳುಹಿಸಿದಾಗ ಲೋಕಸಭೆಯಲ್ಲಿ 540 ಮತಗಳ ಪೈಕಿ ಸರ್ಕಾರದ ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಬಿದ್ದಿದ್ದವು. ಆದರೆ, ಕಳೆದ ಅಧಿವೇಶನಕ್ಕೆ ಹೋಲಿಸಿದರೆ ಸದ್ಯ ಸರ್ಕಾರದ ಬಲ ವೃದ್ಧಿಸಿದೆ. ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 20 ಸಂಸದರು ಹಾಗೂ ಶಿವಸೇನೆಯ (ಯುಬಿಟಿ) ಆರು ಸಂಸದರು ಎನ್‌ಡಿಎ ಕಡೆ ವಾಲಿರುವುದು ಸರ್ಕಾರಕ್ಕೆ ಆನೆಬಲ ಬಂದಿದೆ. ಇದರೊಂದಿಗೆ ಎನ್‌ಸಿಪಿ (ಶರದ್ ಪವಾರ್) ಪಕ್ಷದ 8 ಸಂಸದರ ಬೆಂಬಲ ಸಿಗುವ ನಿರೀಕ್ಷೆಯೂ ಇದೆ. ಆದಾಗ್ಯೂ, ಡಿಎಂಕೆಯ 22 ಸಂಸದರನ್ನು ಒಪ್ಪಿಸುವುದು ಅಥವಾ ಕಾಂಗ್ರೆಸ್‌ ಸೇರಿ ಕೆಲವು ವಿರೋಧ ಪಕ್ಷದ ಸಂಸದರು ಮತದಾನದಿಂದ ದೂರ ಉಳಿಯುವಂತೆ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ರಾಜ್ಯಸಭೆಯಲ್ಲೂ ಎನ್‌ಡಿಎ ಮೂರನೇ ಎರಡರಷ್ಟು ಬಹುಮತದ ಸನಿಹದಲ್ಲಿದೆ.

ಒಂದು ವೇಳೆ ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಂಡರೂ, ದೇಶದ ಕನಿಷ್ಠ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳು ಇದಕ್ಕೆ ಅನುಮೋದನೆ ನೀಡಬೇಕಾಗುತ್ತದೆ. ಪ್ರಸ್ತುತ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದರಿಂದ ಈ ಹಂತವನ್ನು ದಾಟುವುದು ಸರ್ಕಾರಕ್ಕೆ ಕಷ್ಟವಾಗಲಾರದು.

ಸಂಸತ್ತಿನಲ್ಲಿ ಈ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತ ಸಾಬೀತುಪಡಿಸುವುದೇ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಸುಧಾರಣೆಯು ದೇಶದ ಒಕ್ಕೂಟ ವ್ಯವಸ್ಥೆಗೆ ಹಾಗೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆ ತರಲಿದೆ. ಮಧ್ಯಂತರದಲ್ಲಿ ರಾಜ್ಯ ಸರ್ಕಾರಗಳು ಪತನಗೊಂಡರೆ, ಅತಂತ್ರ ವಿಧಾನಸಭೆ ನಿರ್ಮಾಣವದರೆ ಏನು ಮಾಡಬೇಕು ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಕೇಂದ್ರ ಸರ್ಕಾರ ಈ ಬಾರಿ ಪೂರ್ಣ ರಾಜಕೀಯ ಶಕ್ತಿಯನ್ನು ಕ್ರೋಡೀಕರಿಸಿಕೊಂಡು ಅಖಾಡಕ್ಕಿಳಿದಿದೆ. ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿ, ಪ್ರಾದೇಶಿಕ ಪಕ್ಷಗಳ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಮುಂಗಾರು ಅಧಿವೇಶನದ ಕೊನೆಯ ದಿನಗಳು ದೇಶದ ಚುನಾವಣಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತವೆಯೇ ಅಥವಾ ಮತ್ತೊಂದು ಸುತ್ತಿನ ಸಂಸದೀಯ ಸಂಘರ್ಷಕ್ಕೆ ಕಾರಣವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries