ನವದೆಹಲಿ: 'ಸದಸ್ಯರೊಬ್ಬರು ಪಿತ್ರಾರ್ಜಿತ ಕೃಷಿ ಜಮೀನಿನಲ್ಲಿ ತಮ್ಮ ಪಾಲನ್ನು ಮಾರಾಟ ಮಾಡಲು ಬಯಸಿದರೆ, ಅದನ್ನು ಖರೀದಿಸಲು ಕುಟುಂಬದ ನಿಕಟ ಸದಸ್ಯರಿಗೆ ಆದ್ಯತೆ ಇರುತ್ತದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 22ರ ವ್ಯಾಪ್ತಿಯಿಂದ ಕೃಷಿ ಜಮೀನನ್ನು ಹೊರಗಿಡುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ವರ್ಗ -I ಉತ್ತರಾಧಿಕಾರಿಗಳ (ಸಂಗಾತಿ, ಮಕ್ಕಳು, ತಾಯಿ ಸೇರಿ ಕುಟುಂಬದ ನಿಕಟ ಸದಸ್ಯರು) ಆದ್ಯತೆಯ ಹಕ್ಕು ಕೃಷಿ ಜಮೀನಿಗೂ ವಿಸ್ತರಿಸುತ್ತದೆ. ಆಸ್ತಿಯಲ್ಲಿ ತಮ್ಮ ಹಕ್ಕನ್ನು ವರ್ಗಾಯಿಸಲು ಉದ್ದೇಶಿಸಿರುವ ಸಹ-ಉತ್ತರಾಧಿಕಾರಿಯ ಪಾಲನ್ನು ಪಡೆಯಲು ಇವರಿಗೆ ಆದ್ಯತೆ ಇರುತ್ತದೆ.ಕೃಷಿ ಜಮೀನನ್ನು ಸೆಕ್ಷನ್ 22ರ ವ್ಯಾಪ್ತಿಯಿಂದ ಹೊರಗಿಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕುಟುಂಬ ಹಿಡುವಳಿಗಳ ವಿಭಜನೆ ಮತ್ತು ಹೊರಗಿನವರ ಒಳನುಗ್ಗುವಿಕೆ ತಡೆಗಟ್ಟುವುದು ಸೆಕ್ಷನ್ 22ರ ಉದ್ದೇಶವಾಗಿದೆ ಎಂದು ನ್ಯಾಯಪೀಠ ಹೇಳಿದೆ.

