ಕಾಸರಗೋಡು: ನೀಲೇಶ್ವರದ ಚಾತಮತ್‍ನಲ್ಲಿ ಕಾಣಿಸಿಕೊಂಡಿದ್ದ ಆಹಾರ ವಿಷಬಾಧೆ ಘಟನೆಯ ನಂತರ ನಡೆಸಿದ ತಪಾಸಣೆಯಲ್ಲಿ ಐದು ಮಕ್ಕಳಿಗೆ 'ಶಿಗೆಲ್ಲಾ' ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಐದು ಮಕ್ಕಳ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ತೃಪ್ತಿಕರವಾಗಿರುವುದಾಗಿ ಆರೋಗ್ಯಾಧಿಕರಿಗಳು ತಿಳಿಸಿದ್ದಾರೆ. ಶಿಗೆಲ್ಲಾ ಸೋಂಕು ಪತ್ತೆಯಾಗಿರುವುದರಿಂದ ಈ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಮತ್ತು ಸೋಂಕು ತಡೆಗಟ್ಟುವ ಕ್ರಮ ತೀವ್ರಗೊಳಿಸಿದೆ.
ವಾರದ ಹಿಂದೆ, ಈ ಪ್ರದೇಶದಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡು ಆಹಾರ ಸೇವಿಸಿದವರಲ್ಲಿ ಆಹಾರವಿಷಬಾಧೆ ಹಿನ್ನೆಲೆಯಲ್ಲಿ ಅತಿಸಾರ ಕಾಣಿಸಿಕೊಂಡಿದ್ದು, ಮಕ್ಕಳು ಸೇರಿದಂತೆ ಒಟ್ಟು ಇಪ್ಪತ್ತೇಳು ಮಂದಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ತೀವ್ರ ಅತಿಸಾರ (ಕೆಲವೊಮ್ಮೆ ಮಲದಲ್ಲಿ ರಕ್ತ ಮತ್ತು ಲೋಳೆಯ ಅಂಶವಿರುವುದು), ಹೊಟ್ಟೆ ನೋವು, ವಾಕರಿಕೆ ಮತ್ತು ಜ್ವರ ಇದರ ಮುಖ್ಯ ಲಕ್ಷಣಗಳಾಗಿವೆ. ತೀವ್ರ ಅತಿಸಾರವು ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು. ಈ ಮಧ್ಯೆ, ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಶಿಗೆಲ್ಲಾ ಬ್ಯಾಕ್ಟೀರಿಯಾ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ನಿಲೇಶ್ವರ ನಗರಸಭೆಯ ನೇತೃತ್ವದಲ್ಲಿ ತೀವ್ರತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಆಯೋಜಿಸಲು, ಆರೋಗ್ಯ ಇಲಾಖೆ ಹಾಗೂ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಶುಚಿತ್ವ ಸಿಬ್ಬಂದಿಯನ್ನು ಒಳಗೊಂಡ 'ತ್ವರಿತ ಪ್ರತಿಕ್ರಿಯೆ ತಂಡ'ದ (ಖಖಖಿ)ತುರ್ತು ಸಭೆಯನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿಮೂಡಿಸುವಕೆಲಸವನ್ನು ನಗರಸಭೆ ಕೈಗೊಂಡಿದೆ.

