ಕಾಸರಗೋಡು: ರಾಜ್ಯ ಸರ್ಕಾರದ ನೂರು ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ವಿಶೇಷ ಅಭಿಯಾನದ ಮೂಲಕ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಸೂಚಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ರಾಜ್ಯದ ಮೊದಲ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಭೂಬಳಕೆ ಬದಲಾವಣೆ, ಹಕ್ಕುಪತ್ರ ಮತ್ತು ಭೂಮಿಗೆ ಸಂಬಂಧಿಸಿದ ಇತರ ವಿಷಯಗಳ ಪರಿಹಾರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಕಂದಾಯ ಇಲಾಖೆಯ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಕಚೇರಿಗಳನ್ನು ನಾಗರಿಕ ಸ್ನೇಹಿಯನ್ನಾಗಿ ಮಾಡಲಾಗುವುದು. ರಾಜ್ಯದಲ್ಲಿ ಭೂಬಳಕೆ ಬದಲಾವಣೆಗೆ ಸಂಬಂಧಿಸಿದ 2.5 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳಲ್ಲಿ 25,000 ಅರ್ಜಿಗಳನ್ನು 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಒಟ್ಟು ಒಂದು ಲಕ್ಷ ದೂರುಗಳ ಪೈಕಿ 48,000 ದೂರುಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಈ ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮೀನುಗಾರ ಸಮುದಾಯದವರಿಗೆ ಭೂ ಒಡೆತನದ ಹಕ್ಕುಪತ್ರಗಳನ್ನು ವಿತರಿಸಲು ಆದ್ಯತೆ ನೀಡಲಾಗುವುದು. ಕಂದಾಯ ಇಲಾಖೆಯಲ್ಲಿ ತೆರವಾಗಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವ ನಿಟ್ಟಿನಲ್ಲಿ ಪಿಎಸ್‍ಸಿಗೆ ವರದಿ ಮಾಡಲು ಸರ್ಕಾರ ಸೂಚನೆ ನೀಡಲಾಗಿದೆ. ದೀರ್ಘ ಸಮಯದ ಬೇಡಿಕೆಯಾಗಿರರುವ ಮಂಜೇಶ್ವರದಲ್ಲಿ ಕಂದಾಯ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ವರದಿ ಮಂಡಿಸಿದರು. ರಾಜ್ಯ ಕಂದಾಯ ಕಾರ್ಯದರ್ಶಿ ಜೀವನ್ ಬಾಬು ಐಎಎಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಭೂ ಕಂದಾಯ ಆಯುಕ್ತ ಎಚ್. ದಿನೇಶನ್ ಐಎಎಸ್ ಮತ್ತು ಭೂಮಾಪನ ನಿರ್ದೇಶಕ ಜೆ. ಅರುಣ್ ಉಪಸ್ಥಿತರಿದ್ದರು. ಸಚಿವರ ಖಾಸಗಿ ಕಾರ್ಯದರ್ಶಿ ಡಾ. ಪಿ.ಕೆ. ಜಯಶ್ರೀ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ಪಿ. ಉದಯಕುಮಾರ್, ಸಹಾಯಕ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಉಪ ತಹಸೀಲ್ದಾರರು, ಕಿರಿಯ ಅಧೀಕ್ಷಕರು ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



