ಕಾಸರಗೋಡು: ವಿಕಲ ಚೇತನಳಾದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ ಯಾನೆ ಮುಹಮ್ಮದ್ ಸಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳ್ಳಂ ಯಾನೆ ಕೆ.ಪಿ. ಶರೀಫ್ (40),ಮೈಲಾಟಿ ಕುಟ್ಟಪ್ಪುನ್ನ ಕುರುಕನ್‍ಕುನ್ನು ನಿವಾಸಿಯೂ ಪ್ರಸ್ತುತ ತಚ್ಚಂಗಾಡ್ ಅರಬಿಪಳ್ಳಿ ಸಮೀಪ ವಾಸಿಸುವ ಎ.ಟಿ. ಮುಹಮ್ಮದ್ ನೌಶಾದ್ (39) ಎಂಬವರನ್ನು ಬೇಕಲ ಪೋಲೀಸರು ಬಂಧಿಸಿದ್ದಾರೆ. ಇವರ ಪೈಕಿ ನೌಶಾದ್ ಹಾಗೂ ಶೆರೀಫ್ ಆಟೋ ಚಾಲಕರಾಗಿದ್ದಾರೆ. ಮುಹಮ್ಮದ್ ಸಾಲಿಹ್ ತರಕಾರಿ ಅಂಗಡಿಯ ನೌಕರನಾಗಿದ್ದಾನೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೋಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಬಾಲಕಿಗೆ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಲಭಿಸಿದ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಆಧಾರದಲ್ಲಿ ಬೇಕಲ ಪೋಲೀಸರು 5 ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪಳ್ಳಿಕ್ಕೆರೆ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಗೆ ಆರೋಪಿಗಳು ಕಿರುಕುಳ ನೀಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

