ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಗೆ ಒಂದು ತಿಂಗಳವರೆಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳು ನಡೆಯುತ್ತಿರುವುದರಿಂದ ಜುಲೈ 15 ರಿಂದ ಆಗಸ್ಟ್ 15ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಆದೇಶ ಹೊರಡಿಸಿದೆ.
ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಇಂತಹ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂದು ಎಎಸ್‌ಐ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿರುವ ಕೆಂಪು ಕೋಟೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದಲೂ ದೇಶದ ಅಧಿಕೃತ ಸ್ವಾತಂತ್ರ್ಯದಿನಾಚರಣೆಯ ಮುಖ್ಯ ವೇದಿಕೆಯಾಗಿದೆ. ಆಗಸ್ಟ್ 15ರಂದು ನಡೆಯುವ ಈ ಸಮಾರಂಭದಲ್ಲಿ ಭಾಗವಹಿಸಲು ಸರ್ಕಾರದ ವತಿಯಿಂದ ಪಾಸ್ ಪಡೆದವರಿಗೆ ಮಾತ್ರ ಕೆಂಪು ಕೋಟೆ ಆವರಣ ಪ್ರವೇಶಿಸಲು ಅವಕಾಶವಿರುತ್ತದೆ.

