ನವದೆಹಲಿ: 'ಭಾರತೀಯ ವಾಯುಯಾನ ಅಧಿನಿಯಮ, 2024'ರ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಎರಡು ವಾರಗಳಲ್ಲಿ ತನ್ನ ಮುಂದೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ವಿಮಾನಯಾನ ದರಗಳಲ್ಲಿ ಅನಿರೀಕ್ಷಿತ ಏರಿಳಿತಗಳು ಮತ್ತು ಖಾಸಗಿ ವಾಯುಯಾನ ಸಂಸ್ಥೆಗಳು ವಿಧಿಸುವ ಹೆಚ್ಚುವರಿ ಶುಲ್ಕಗಳಿಗೆ ಕಡಿವಾಣ ಹಾಕಲು ನಿಯಂತ್ರಕ ಮಾರ್ಗಸೂಚಿಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಈ ನಿಯಮಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರಕ್ಕೆ ತಿಳಿಸಿದೆ.
ಕರಡು ನಿಯಮಗಳನ್ನು ಸಿದ್ಧಪಡಿಸಲಾಗಿದ್ದು,ಅವುಗಳ ಭಾಷಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದ ನಂತರ ಪೀಠವು ಈ ನಿರ್ದೇಶನವನ್ನು ಹೊರಡಿಸಿತು.
ಭಾರತದ ವಾಯುಯಾನ ಕ್ಷೇತ್ರವನ್ನು ಆಧುನೀಕರಿಸುವ ಉದ್ದೇಶದಿಂದ ಜನವರಿ ೨೦೨೫ ರಲ್ಲಿ ಜಾರಿಗೆ ಬಂದ 'ಭಾರತೀಯ ವಾಯುಯಾನ ಅಧಿನಿಯಮ, 2024'ರ ಪೂರಕ ನಿಯಮಗಳನ್ನು ಇನ್ನಷ್ಟೇ ಅಧಿಸೂಚಿಸಬೇಕಿದೆ.
ಸಾಮಾಜಿಕ ಕಾರ್ಯಕರ್ತ ಎಸ್.ಲಕ್ಷ್ಮೀನಾರಾಯಣನ್ ಸಲ್ಲಿಸಿರುವ ಅರ್ಜಿಯು, ವಾಯುಯಾನ ಸಂಸ್ಥೆಗಳ ದರ ನಿಗದಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಯಾಣಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ನಾಗರಿಕ ವಿಮಾನಯಾನ ಕ್ಷೇತ್ರವನ್ನು ಮೇಲ್ವಿಚಾರಣೆ ಮಾಡಲು ಸ್ವತಂತ್ರ ನಿಯಂತ್ರಕ ವ್ಯವಸ್ಥೆಯನ್ನು ಜಾರಿಗೆ ತರಲು ಕೋರಿದೆ.
ವಿಮಾನಯಾನ ದರಗಳನ್ನು ನಿಯಂತ್ರಿಸಲು ಪ್ರತ್ಯೇಕ ನಿಯಂತ್ರಕ ಸಂಸ್ಥೆ ಇಲ್ಲದಿರುವುದು ವಿಶೇಷವಾಗಿ ಹೆಚ್ಚಿನ ಬೇಡಿಕೆಯ ಸಂದರ್ಭಗಳಲ್ಲಿ ವಾಯುಯಾನ ಸಂಸ್ಥೆಗಳು ಅನಿಯಂತ್ರಿತ ದರ ಏರಿಕೆಯನ್ನು ಮತ್ತು ಗುಪ್ತ ಶುಲ್ಕಗಳನ್ನು ಹೇರಲು ಅವಕಾಶ ನೀಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

