ಅಂಕಾರಾ: ಮುಜುಗರದ ಸನ್ನಿವೇಶಗಳು ಕೆಲವರಿಗೆ ಒಂದಾದ ಮೇಲೊಂದರಂತೆ ಎದುರಾಗುತ್ತಿರುತ್ತವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಹವರ ಗುಂಪಿಗೆ ಸೇರುತ್ತಾರೆ. ಅವರು ಆಗಾಗ್ಗೆ ನೀಡುವ ಹೇಳಿಕೆಗಳು ವಿವಾದ ಸೃಷ್ಟಿಸುತ್ತವೆ. ಹಲವು ಸಂದರ್ಭಗಳಲ್ಲಿ ನಗೆಪಾಟಲಿಗೆ ಈಡಾಗುವಂತೆಯೂ ಆಗಿದೆ.
ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೊ ಶೃಂಗಸಭೆಯಲ್ಲಿ ಮಾತನಾಡುವ ವೇಳೆ, ಇರಾನ್ ಅನ್ನು 'ಇಸ್ಲಾಮಿಕ್ ಸ್ಟೇಟ್ ಆಫ್ ಜಪಾನ್' ಎಂದು ಉಲ್ಲೇಖಿಸಿ ಗುರುವಾರ ಮುಜುಗರಕ್ಕೀಡಾಗಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ ಭಾಗಿಯಾದ ಟ್ರಂಪ್, ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ಮಾತು ಶುರುಮಾಡಿದ್ದರು.
ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಅಮೆರಿಕದ 'ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ' ಮೇಲೆ ಇರಾನ್ ನಡೆಸಿದ ದಾಳಿಯನ್ನು ಸ್ಮರಿಸಿದ ಟ್ರಂಪ್, 'ಇಸ್ಲಾಮಿಕ್ ರಿಪಬ್ಲಿಕ್ ಆಫ್ ಜಪಾನ್, ಸುಮಾರು ಒಂದು ತಾಸಿನಲ್ಲಿ 111 ಕ್ಷಿಪಣಿಗಳನ್ನು ಯುದ್ಧನೌಕೆಯ ಮೇಲೆ ಹಾರಿಸಿತ್ತು' ಎಂದು ಹೇಳಿದರು.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎನ್ನುವ ಬದಲು ಜಪಾನ್ ಎಂದು ಹೇಳಿದರು. ಈ ಸಂದರ್ಭದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಟೀಕೆ ಸೇರಿದಂತೆ, ವಿವಿಧ ರೀತಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇರಾನ್ ಜೊತೆ ಮಾತುಕತೆ; ಮುಗಿದ ಅಧ್ಯಾಯನ್ಯಾಟೊ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಇರಾನ್ ವಿರುದ್ಧ ಹರಿಹಾಯ್ದಿದ್ದ ಟ್ರಂಪ್, ಶಾಂತಿ ಒಪ್ಪಂದದ ಮಾತುಕತೆ ಇನ್ನು ಮುಗಿದ ಅಧ್ಯಾಯ ಎಂದಿದ್ದರು.
'ಯುದ್ಧ ಕೊನೆಗೊಳಿಸಲು ಇರಾನ್‌ನೊಂದಿಗೆ ಸಹಿ ಮಾಡಲಾಗಿದ್ದ ತಿಳುವಳಿಕಾ ಒಪ್ಪಂದ (ಎಂಒಯು) ಈಗ ಮುಗಿದ ಅಧ್ಯಾಯ. ಒಂದು ವೇಳೆ ಒಪ್ಪಂದ ಮಾಡಿಕೊಂಡರೂ, ಅದು ಉಳಿಯುತ್ತದೆ ಎಂಬ ವಿಶ್ವಾಸವಿಲ್ಲ' ಎಂದು ಹೇಳಿದ್ದರು.

