ಮುಳ್ಳೇರಿಯ: ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ನಡೆಯಿತು. ಈ ಸಂದರ್ಭ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಹಸ್ತ ಪತ್ರಿಕೆ 'ಚಿಗುರು' ಶುಕ್ರವಾರ ಬಿಡುಗಡೆಗೊಂಡಿತು.
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಸ್ವತಃ ಬರೆದ ಕವನ, ಕಥೆ, ಚಿತ್ರ, ಲೇಖನಗಳನ್ನು ಒಳಗೊಂಡ 'ಚಿಗುರು' ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳೇ ಸಂಪಾದಕ ಮಂಡಳಿಯಾಗಿ ಕಾರ್ಯನಿರ್ವಹಿಸಿ ಪತ್ರಿಕೆಯನ್ನು ಸಿದ್ಧಪಡಿಸಿರುವುದು ವಿಶೇಷ.
ವಿಶೇಷ ಆಕರ್ಷಣೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ಹಳೆ ವಿದ್ಯಾರ್ಥಿನಿಯರಾದ ಹಿತೈಷಿ ಮತ್ತು ಅನನ್ಯ ಅವರು ಮುಖ್ಯ ಅತಿಥಿಗಳಾಗಿದ್ದರು. ಸ್ನಾತಕೋತ್ತರ ಕಲಿಕೆಗೆ ಕಾಲಿಡುತ್ತಿರುವ ಇವರು ತಮ್ಮ ಶಾಲಾ ದಿನಗಳ ನೆನಪು, ಕಾಲೇಜು ಅನುಭವ ಹಾಗೂ ಬರವಣಿಗೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಹೃದಯಸ್ಪರ್ಶಿಯಾಗಿ ಮಾತನಾಡಿದರು. ಹಿರಿಯ ಅಕ್ಕಂದಿರ ಮಾರ್ಗದರ್ಶನ ಕಿರಿಯ ವಿದ್ಯಾರ್ಥಿಗಳಿಗೆ ಹೊಸ ಹುಮ್ಮಸ್ಸು ತುಂಬಿತು.
ಹಸ್ತ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಮುಖ್ಯ ಶಿಕ್ಷಕ ಸಂಜೀವ ಅವರು, ಮಕ್ಕಳಲ್ಲಿನ ಬರವಣಿಗೆ ಹಾಗೂ ಸೃಜನಶೀಲ ಕೌಶಲ್ಯಗಳನ್ನು ಪ್ರೋತ್ಸಾಹಿಸುವುದು ಈ ಹಸ್ತ ಪತ್ರಿಕೆಯ ಮುಖ್ಯ ಉದ್ದೇಶ. 'ಚಿಗುರು' ಎಂಬ ಹೆಸರಿನಂತೆ ಮಕ್ಕಳ ಪ್ರತಿಭೆ ಚಿಗುರೊಡೆಯಲಿ ಎಂದು ಹಾರೈಸಿದರು.
ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಶಿಕ್ಷಕರಾದ ಡಾ. ಶ್ರೀಶ ಪಂಜಿತ್ತಡ್ಕ, ರತೀಶ, ನಯನ ಕುಮಾರಿ, ಸರಣಿಯ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೀರ್ತೇಶ್ ಸ್ವಾಗತಿಸಿ, ಯುಕ್ತಿ ವಂದಿಸಿದರು.

.jpg)
.jpg)
