ಬಹ್ರೈಚ್: ಅಯೋಧ್ಯೆಯ ರಾಮ ಮಂದಿರದ ಟ್ರಸ್ಟ್‌ನಲ್ಲಿ ತನಗೆ ಬೇಕಾದವರನ್ನು ಕೂರಿಸುವ ಮೂಲಕ ಸರ್ಕಾರವು ಕಳ್ಳತನಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡುವ ಉದ್ದೇಶದಿಂದ ಎಸ್‌ಐಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.
ದೇಣಿಗೆ ಕಳ್ಳತನ ಪ್ರಕರಣವು ಆಕಸ್ಮಿಕವಾಗಿ ಸಂಭವಿಸಿಲ್ಲ. ಇದೊಂದು ಯೋಜಿತ ಕೃತ್ಯವಾಗಿದೆ. ದೇವಸ್ಥಾನಗಳನ್ನು ಕಟ್ಟುವುದು ಧಾರ್ಮಿಕ ನಾಯಕರ ಕೆಲಸ, ಅದರ ಆಡಳಿತದಲ್ಲೂ ಧಾರ್ಮಿಕ ನಾಯಕರು ಇರಬೇಕು. ಆದರೆ, ಇಲ್ಲಿ ಸರ್ಕಾರವು ಆಯ್ಕೆ ಮಾಡಿರುವ ವ್ಯಕ್ತಿಗಳು ಟ್ರಸ್ಟ್‌ನೊಳಗೆ ಇದ್ದಾರೆ. ಕಳ್ಳತನ ಮಾಡುವ ಉದ್ದೇಶದಿಂದಲೇ ಅವರನ್ನು ಅಲ್ಲಿ ನೇಮಕ ಮಾಡಲಾಗಿದೆ ಎಂದು ನಮಗೆ ಅನಿಸುತ್ತದೆ ಎಂದು ಆರೋಪಿಸಿದ್ದಾರೆ.
ರಾಮ ಜನ್ಮಭೂಮಿ ಟ್ರಸ್ಟ್‌ಗೆ ಚಂಪತ್ ರಾಯ್ ಅವರು ರಾಜೀನಾಮೆ ನೀಡಿರುವುದು ಕೇವಲ ಒಂದು ಪ್ರಹಸನ ಅಷ್ಟೇ. ಅವರ ಸಹಿ ಇರುವ ಪಾಸ್‌ಗಳನ್ನು ಮಾಧ್ಯಮಗಳೇ ಜನರಿಗೆ ತೋರಿಸಿವೆ. ಟ್ರಸ್ಟ್ ಅನ್ನು ಕೂಡ ಸರ್ಕಾರವೇ ರಚನೆ ಮಾಡಿದ್ದು, ಇದೀಗ ಅವರೇ ಎಸ್‌ಐಟಿ ರಚಿಸಿದ್ದಾರೆ. ಹಾಗಾದರೆ, ಇಲ್ಲಿ ಯಾರು ಯಾರಿಗೆ ಶಿಕ್ಷೆ ನೀಡುತ್ತಿದ್ದಾರೆ? ಇದು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನವಷ್ಟೇ ಎಂದು ಹೇಳಿದ್ದಾರೆ.
ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು.
ಈ ಪ್ರಕರಣದ ತನಿಖೆಯಲ್ಲಿನ ಪ್ರಗತಿ ಕುರಿತ ಸ್ಥಿತಿಗತಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್, ಎಸ್‌ಐಟಿಗೆ ಸೋಮವಾರ(ಜುಲೈ 13) ನಿರ್ದೇಶಿಸಿದೆ.

