ಸಮೀಕ್ಷೆಯ ಪ್ರಕಾರ, NDA ಬೆಂಬಲಿಗರ ಪೈಕಿ ಶೇ. 52.5ರಷ್ಟು ಮಂದಿ ತಮ್ಮ ವಾಹನಗಳಲ್ಲಿ E20 ಪೆಟ್ರೋಲ್ ಬಳಕೆಗೆ ಆದ್ಯತೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಶೇ. 18.1ರಷ್ಟು ಮಂದಿ ಮಾತ್ರ E20 ಬಳಕೆಗೆ ಆದ್ಯತೆ ನೀಡುವುದಾಗಿ ಹೇಳಿದ್ದು, ಉಳಿದ ಶೇ. 29.5ರಷ್ಟು ಮಂದಿ ಈ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ವಿರೋಧ ಪಕ್ಷಗಳ ಬೆಂಬಲಿಗರ ಪೈಕಿ E20ಗೆ ವಿರೋಧ ಇನ್ನಷ್ಟು ಹೆಚ್ಚಾಗಿದ್ದು, ಶೇ. 57.9ರಷ್ಟು ಮಂದಿ ಅದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇತರ ರಾಜಕೀಯ ಪಕ್ಷಗಳ ಬೆಂಬಲಿಗರ ಪೈಕಿ ಶೇ. 55ರಷ್ಟು ಮಂದಿ ಕೂಡ E20 ಪೆಟ್ರೋಲ್ ಬಳಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಮತದಾರರ ಪೈಕಿ ಶೇ. 55.1ರಷ್ಟು ಮಂದಿ E20 ಪೆಟ್ರೋಲ್ ತಮ್ಮ ಆದ್ಯತೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಶೇ. 17.1ರಷ್ಟು ಮಂದಿ ಮಾತ್ರ E20 ಪೆಟ್ರೋಲ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಳಿದವರು ಯಾವುದೇ ನಿರ್ಧಾರ ತಿಳಿಸಿಲ್ಲ.
ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ ನೀತಿಗೂ ಸೀಮಿತ ಬೆಂಬಲವೇ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 52ರಷ್ಟು ಮಂದಿ ಪೆಟ್ರೋಲ್ ಗೆ ಎಥನಾಲ್ ಮಿಶ್ರಣ ಮಾಡುವುದನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಶೇ. 22ರಷ್ಟು ಮಂದಿ ಮಾತ್ರ ಬೆಂಬಲ ವ್ಯಕ್ತಪಡಿಸಿದ್ದು, ಉಳಿದವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
NDA ಬೆಂಬಲಿಗರ ಪೈಕಿ ಶೇ. 48.2ರಷ್ಟು ಮಂದಿ ಎಥನಾಲ್ ಮಿಶ್ರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಶೇ. 24.4ರಷ್ಟು ಮಂದಿ ಬೆಂಬಲಿಸಿದ್ದಾರೆ. ಉಳಿದ ಶೇ. 27.4ರಷ್ಟು ಮಂದಿ ಯಾವುದೇ ನಿರ್ಧಾರ ತಿಳಿಸಿಲ್ಲ.
ವಾಹನಗಳ ಇಂಧನ ಕಾರ್ಯಕ್ಷಮತೆ (ಮೈಲೇಜ್) ಕುಂಠಿತಗೊಳ್ಳಲಿದೆ ಎಂಬ ಆತಂಕವೂ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 52.8ರಷ್ಟು ಮಂದಿ E20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. NDA ಬೆಂಬಲಿಗರ ಪೈಕಿ ಶೇ. 51.2ರಷ್ಟು ಮಂದಿ ಹಾಗೂ ವಿರೋಧ ಪಕ್ಷಗಳ ಬೆಂಬಲಿಗರ ಪೈಕಿ ಶೇ. 55.4ರಷ್ಟು ಮಂದಿ ಇದೇ ಕಳವಳ ವ್ಯಕ್ತಪಡಿಸಿದ್ದಾರೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳು ಹಾನಿಗೀಡಾಗಬಹುದು ಎಂಬ ಆತಂಕವೂ ವ್ಯಾಪಕವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 54.2ರಷ್ಟು ಮಂದಿ ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಬಹುತೇಕ ವಾಹನಗಳು ಹಾನಿಗೀಡಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. NDA ಬೆಂಬಲಿಗರ ಪೈಕಿ ಶೇ. 49.9ರಷ್ಟು ಮಂದಿ ಹಾಗೂ ವಿರೋಧ ಪಕ್ಷಗಳ ಬೆಂಬಲಿಗರ ಪೈಕಿ ಶೇ. 60.2ರಷ್ಟು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಶೇ. 14.3ರಷ್ಟು ಮಂದಿ E20 ಪೆಟ್ರೋಲ್ ಕೆಲವು ವಾಹನಗಳಿಗೆ ಮಾತ್ರ ಹಾನಿ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ. 10.9ರಷ್ಟು ಮಂದಿ ಮಾತ್ರ ವಾಹನಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
E20 ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಿರುವುದು ಹಳೆಯ ವಾಹನ ಮಾಲಕರಿಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯಕ್ಕೂ ಸಮೀಕ್ಷೆಯಲ್ಲಿ ಬಹುಮತ ದೊರೆತಿದೆ. ಒಟ್ಟಾರೆ ಶೇ. 56.3ರಷ್ಟು ಮಂದಿ ಈ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇವರಲ್ಲಿ ಶೇ. 49.2ರಷ್ಟು NDA ಬೆಂಬಲಿಗರು ಹಾಗೂ ಶೇ. 65.8ರಷ್ಟು ವಿರೋಧ ಪಕ್ಷಗಳ ಬೆಂಬಲಿಗರು ಸೇರಿದ್ದಾರೆ.
E20 ಪೆಟ್ರೋಲ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ E20 ಪೆಟ್ರೋಲ್ ಮತ್ತು ಸಾಮಾನ್ಯ ಪೆಟ್ರೋಲ್ ಎರಡರ ನಡುವೆಯೂ ಆಯ್ಕೆಯ ಅವಕಾಶ ನೀಡಬೇಕು ಎಂಬ ಆಗ್ರಹವೂ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಒಟ್ಟಾರೆ ಶೇ. 75.9ರಷ್ಟು ಮಂದಿ ಎರಡೂ ಬಗೆಯ ಇಂಧನಗಳು ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳ ಬೆಂಬಲಿಗರು ಬೆಂಬಲ ಸೂಚಿಸಿದ್ದು, NDA ಬೆಂಬಲಿಗರ ಪೈಕಿ ಶೇ. 72.4ರಷ್ಟು ಮಂದಿ ಕೂಡ ಗ್ರಾಹಕರಿಗೆ ಆಯ್ಕೆಯ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

