ನವದೆಹಲಿ: ಭಾರತವು ಅಮೆರಿಕದೊಂದಿಗಿನ ಮಧ್ಯಂತರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ಅಂತರರಾಷ್ಟ್ರೀಯ ಮಾಧ್ಯಮಗಳ ಸುದ್ದಿಯನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನಿರಾಕರಿಸಿದ್ದು, ಅವೆಲ್ಲವೂ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜೂನ್‌ನಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿಯೊಂದಿಗೆ ಸಭೆ ನಡೆಸಲಾಗಿದ್ದು, ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಅಂತಿಮ ಹಂತವನ್ನು ತಲುಪಿವೆ. ಗಮನಾರ್ಹ ಪ್ರಗತಿ ಕಂಡುಬಂದಿದೆ. ಎರಡೂ ದೇಶಗಳು ಪರಸ್ಪರ ಪ್ರಯೋಜನಕಾರಿ ಒಪ್ಪಂದಕ್ಕೆ ಬದ್ಧವಾಗಿವೆ. ಈ ದಿಕ್ಕಿನಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿವೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಹೊರತುಪಡಿಸಿ ವ್ಯಾಪಾರ ಒಪ್ಪಂದಕ್ಕೆ ಯಾವುದೇ ಅಡೆತಡೆಗಳಿಲ್ಲ. ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮಾತುಕತೆಯಲ್ಲಿ ಯಾವುದೇ ಸವಾಲುಗಳು ಎದುರಾಗಿಲ್ಲ. ಎರಡೂ ದೇಶಗಳು ಸಕಾರಾತ್ಮಕ ಮನೋಭಾವದಿಂದ ಮುಂದುವರಿಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತರಾಷ್ಟ್ರೀಯ ಮಾಧ್ಯಮಗಳು ಭಾರತವು ಅಮೆರಿಕದೊಂದಿಗೆ ಹೆಚ್ಚು ಅನುಕೂಲಕರ ಒಪ್ಪಂದವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಮಧ್ಯಂತರ ಒಪ್ಪಂದಕ್ಕೆ ಭಾರತ ತಿರಸ್ಕರಿಸಿದೆ ಎಂದು ವರದಿ ಮಾಡಿದ್ದವು.

