ನವದೆಹಲಿ: ವೆನೆಜುವೆಲಾದಿಂದ ಸ್ವದೇಶಕ್ಕೆ ತಂದಿದ್ದ ಭಾರತದ ನಾವಿಕರೊಬ್ಬರ ಮೃತದೇಹದಲ್ಲಿ ಅಂಗಾಂಗ ಕಣ್ಮರೆಯಾಗಿರುವ ಕುರಿತು ವಿದೇಶಾಂಗ ಇಲಾಖೆಯು ಅಲ್ಲಿನ ಸರ್ಕಾರದ ಗಮನಸೆಳೆದಿದ್ದು, ತ್ವರಿತವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದೆ.
ಉತ್ತರ ಪ್ರದೇಶದ ದೇವಾರಿಯಾ ಜಿಲ್ಲೆಯ 33 ವರ್ಷದ ನಾವಿಕರ ರಾಕೇಶ್ ಚೌಹಾಣ್ ಅವರು ವೆನೆಜುವೆಲಾದ ಹಡಗಿನಲ್ಲಿ ನಾವಿಕರಾಗಿ ಕೆಲಸ ಮಾಡುತ್ತಿದ್ದರು.
ಮೇ ತಿಂಗಳಲ್ಲಿ ಅವರು ಮೃತಪಟ್ಟ ಬಳಿಕ ಅವರ ದೇಹವನ್ನು ಭಾರತಕ್ಕೆ ಕರೆತಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅವರ ಅಂಗಾಂಗಳು ಕಣ್ಮರೆಯಾಗಿರುವುದು ಕಂಡುಬಂದಿತ್ತು.
'ಮಿದುಳು, ಎರಡು ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಕರುಳು, ಮೂಳೆ, ಧ್ವನಿಪೆಟ್ಟಿಗೆಯು ಕಣ್ಮರೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ' ಎಂದು ದೇವಾರಿಯಾ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಎಚ್.ಕೆ. ಮಿಶ್ರಾ ತಿಳಿಸಿದ್ದಾರೆ.
ಅಂಗಾಂಗ ಕಣ್ಮರೆಯಾಗಿರುವ ಕಾರಣ, ಸಾವಿನ ನೈಜ ಕಾರಣ ಪತ್ತೆಯಾಗಿಲ್ಲ.

