ಮುಂಬೈ: ರಾಜಕೀಯ ಕಾರ್ಯಕರ್ತರೊಬ್ಬರಿಗೆ ನಗರವನ್ನು ತೊರೆಯುವಂತೆ ನಿರ್ದೇಶಿಸಿದ ಮುಂಬೈ ಪೊಲೀಸರ ಆದೇಶವನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ. ಸರ್ಕಾರದ ನಿರ್ಧಾರಗಳ ವಿರುದ್ಧ ಮೆರವಣಿಗೆಗಳು ಅಥವಾ ಪ್ರತಿಭಟನೆಗಳನ್ನು ಆಯೋಜಿಸಿದ ಕಾರಣಕ್ಕೆ ಅಂತಹ ಕ್ರಮವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಸಯೀದ್ ಅಹ್ಮದ್ ಅಬ್ದುಲ್ ವಾಹಿದ್ ಚೌಧರಿ ಅವರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಮಾಧವ್ ಜಮ್ದಾರ್ ಅವರ ಪೀಠವು, ಶಾಂತಿಯುತ ಪ್ರತಿಭಟನೆಗಳು ಮತ್ತು ಸರಕಾರದ ನೀತಿಗಳ ವಿರುದ್ಧ ಘೋಷಣೆ ಕೂಗುವುದು ಸಾರ್ವಜನಿಕ ಶಾಂತಿಗೆ ಧಕ್ಕೆ ತಂದಂತೆ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅಂತಹ ಕಾರಣಗಳನ್ನು ಆಧಾರವಾಗಿರಿಸಿಕೊಂಡು ಗಡೀಪಾರು ಆದೇಶ ನೀಡುವುದು ಕಾನೂನುಬದ್ಧವಲ್ಲ ಎಂದು ಹೇಳಿದ್ದಾರೆ.
ಮುಂಬೈನ ಚೆಂಬೂರು ನಿವಾಸಿಯಾಗಿರುವ ಹಾಗೂ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಅಬ್ದುಲ್ ವಹೀದ್ ಚೌಧರಿ ವಿರುದ್ಧ 2019ರಿಂದ 2024ರ ನಡುವೆ ಹಲವು ಎಫ್ಐಆರ್ಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಮುಂಬೈ ನಗರ, ಉಪನಗರಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಒಂದು ವರ್ಷದ ಅವಧಿಗೆ ಅವರನ್ನು ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿತ್ತು.
ಚೌಧರಿ ವಿರುದ್ಧ ದಾಖಲಾಗಿದ್ದ ಹೆಚ್ಚಿನ ಪ್ರಕರಣಗಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ), ಜ್ಞಾನವಾಪಿ ಮಸೀದಿ ವಿವಾದ, ಬಾಬರಿ ಮಸೀದಿ ಧ್ವಂಸ, ವಕ್ಫ್ ಮಂಡಳಿಯಲ್ಲಿನ ಭ್ರಷ್ಟಾಚಾರದ ಆರೋಪ ಹಾಗೂ ಇಂಧನ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದೆ.
ಚೌಧರಿ ಪರ ವಾದ ಮಂಡಿಸಿದ ವಕೀಲ ಪಯೋಶಿ ರಾಯ್, ತನ್ನ ಕಕ್ಷಿದಾರರ ವಿರುದ್ಧ ಐದು ಎಫ್ಐಆರ್ಗಳನ್ನು ದಾಖಲಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಕೇಂದ್ರ ಸರಕಾರದ ನಿರ್ಧಾರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ದಾಖಲಾಗಿವೆ ಎಂದು ವಾದಿಸಿದರು. ಈ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜಾಮ್ದಾರ್ ಅವರು, ʼಬಿಜೆಪಿ ಸರಕಾರ ಮುರ್ದಾಬಾದ್ʼ ಮತ್ತು ʼಅಮಿತ್ ಶಾ ಮುರ್ದಾಬಾದ್ʼ ಎಂಬ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಉಪ ಪೊಲೀಸ್ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದೇಕೆ ಎಂದು ಪ್ರಶ್ನಿಸಿದರು.

