ಢಾಕಾ: ಅಧಿಕಾರಾವಧಿ ಎರಡು ವರ್ಷ ಬಾಕಿ ಇರುವಾಗಲೇ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಇಲ್ಲಿನ ರಾಜಕೀಯ ಮೂಲಗಳು ಮತ್ತು ಮಾಧ್ಯಮ ವರದಿಗಳು ಗುರುವಾರ ಹೇಳಿವೆ.
'ಅವರು (ಶಹಾಬುದ್ದೀನ್) ಶೀಘ್ರವೇ ರಾಜೀನಾಮೆ ನೀಡುವ ಸಾಧ್ಯತೆ ಇದೆ' ಎಂದು ಪ್ರಧಾನಿ ತಾರಿಖ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷಲಿಸ್ಟ್ ಪಕ್ಷದ (ಬಿಎನ್‌ಪಿ) ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
'ಶೇಖ್ ಹಸೀನಾ ಅವರೊಂದಿಗೆ ಶಹಾಬುದ್ದೀನ್ ಅವರು ಮತ್ತೆ ಸಂಪರ್ಕ ಸಾಧಿಸಿ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಅಸಮಾಧಾನಗೊಂಡಿದೆ' ಎಂದು ಪ್ರೊಥೊಮ್ ಅಲೊ ಪತ್ರಿಕೆ ವರದಿ ಮಾಡಿದೆ.
ಈ ಹಿಂದಿನ ಸಂಸತ್ತು ಶಹಾಬುದ್ದಿನ್ ಅವರನ್ನು ಆಯ್ಕೆ ಮಾಡಿತ್ತು. 2024ರ ಜುಲೈ-ಆಗಸ್ಟ್‌ನಲ್ಲಿ ನಡೆದ ಹಿಂಸಾರೂಪದ ಹೋರಾಟದ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಶಹಾಬುದ್ದೀನ್ ಅವರು ಮಾತ್ರ ಹೋರಾಟದ ನಂತರವೂ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿರುವ ಏಕೈಕ ನಾಯಕರಾಗಿದ್ದಾರೆ.
ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಅವರು ಕಳೆದ ತಿಂಗಳು ಹೇಳಿದ್ದರು.

