HEALTH TIPS

ಅಮೆರಿಕ ವಿರುದ್ಧ ದಾಳಿ ಮುಂದುವರಿಕೆ: ಇರಾನ್‌ ಪ್ರತಿಜ್ಞೆ

ಟೆಹರಾನ್‌: ತನ್ನ ದೇಶದ ಮೇಲಿನ ದಾಳಿಗಳು ನಿಲ್ಲಿಸುವವರೆಗೂ ಪ್ರಾದೇಶಿಕ ದಾಳಿಯನ್ನು ಮುಂದುವರಿಸುವುದಾಗಿ ಇರಾನ್‌ ಗುರುವಾರ ಪ್ರತಿಜ್ಞೆ ಮಾಡಿದೆ. 


'ಇರಾನ್‌ನ ಮೂಲಸೌಕರ್ಯ ಮತ್ತು ಕರಾವಳಿ ಪ್ರದೇಶಗಳನ್ನು ಗುರಿಯಾಗಿಸಿ ಅಮೆರಿಕ ಎಲ್ಲಿಯವರೆಗೆ ದಾಳಿ ನಡೆಸುತ್ತದೆಯೇ ಅಲ್ಲಿಯವರೆಗೆ ಪ್ರತೀಕಾರದ ದಾಳಿಗಳು ಮುಂದುವರಿಯುತ್ತವೆ' ಎಂದು ಇರಾನ್‌ ಸೇನೆಯ ವಕ್ತಾರ ಮೊಹಮ್ಮದ್‌ ಅಕ್ರಮಿನಿಯಾ ತಿಳಿಸಿರುವುದಾಗಿ ಸರ್ಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.

ಇದೇ ವೇಳೆ ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸೌದಿ ಅರೇಬಿಯಾದ ಹಡಗುಗಳ ಮೇಲೆ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾ ಸಂಘರ್ಷವು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ಅಮೆರಿಕದ ಸೇನೆ ಸತತ 12ನೇ ದಿನವೂ ಇರಾನ್‌ ಮೇಲಿನ ದಾಳಿಯನ್ನು ಮುಂದುವರಿಸಿದೆ. ಇರಾನ್‌ನ ಅಹ್ವಾಜ್‌, ರಾಮ್‌ಶೀರ್‌ ಮತ್ತು ಆಂಡಿಮೆಶ್ಕ್‌ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

'ಇರಾಕ್‌ ಹಾಗೂ ಇರಾನ್‌ ಗಡಿಯಲ್ಲಿರುವ ಶಲಾಮ್ಚೆಹ್‌ನಲ್ಲಿ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೇಶದ ಏಕೈಕ ನಾಗರಿಕ ಪರಮಾಣು ಸ್ಥಾವರ ಹೊಂದಿರುವ ಮತ್ತು ಅಮೆರಿಕದ ದಾಳಿಗಳಿಗೆ ಪದೇ ಪದೇ ಗುರಿಯಾಗುವ ಬುಶೆಹರ್‌ಗೆ ಎರಡು ಕ್ಷಿಪಣಿಗಳು ಅಪ್ಪಳಿಸಿವೆ' ಎಂದು ಇರಾನ್‌ ಸರ್ಕಾರಿ ಮಾಧ್ಯಮ ಗುರುವಾರ ತಿಳಿಸಿದೆ.

ಇದಕ್ಕೆ ಪ್ರತಿಯಾಗಿ, ಜೋರ್ಡನ್‌ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ನೆಲೆಗಳು ಹಾಗೂ ಕುಡಿಯುವ ನೀರು ಒದಗಿಸುವ ಇಂಧನ ಮೂಲಸೌಕರ್ಯ ಮತ್ತು ನಿರ್ಲವಣೀಕರಣ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ (ಐಆರ್‌ಜಿಸಿ) ತಿಳಿಸಿದೆ. ಆದರೆ, ಈ ದಾಳಿಗಳಿಗೆ ಪ್ರತಿರೋಧ ಒಡ್ಡಲಾಗಿದೆ ಎಂದು ಜೋರ್ಡನ್‌ ಹಾಗೂ ಕುವೈತ್‌ ಹೇಳಿವೆ.

'ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿದಾಗಲೆಲ್ಲಾ, ಅದರ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಅಮೆರಿಕ ಬಾಂಬ್‌ ದಾಳಿ ನಡೆಸುತ್ತದೆ' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಸೌದಿ ಅರೇಬಿಯಾ ನಾಗರಿಕ ಪರಮಾಣು ಒಪ್ಪಂದ: ಅಮೆರಿಕ ರಿಯಾದ್‌ ಸೌದಿ ಅರೇಬಿಯಾ (ಎಎಫ್‌ಪಿ): ನಾಗರಿಕ ಪರಮಾಣು ಕಾರ್ಯಕ್ರಮ ಅನುಷ್ಠಾನ ಸಂಬಂಧ ಒಪ್ಪಂದ ಮಾಡಿಕೊಳ್ಳುವುದಾಗಿ ಅಮೆರಿಕ ಮತ್ತು ಸೌದಿ ಅರೇಬಿಯಾ ಬುಧವಾರ ಘೋಷಿಸಿವೆ. ಈ ಒಪ್ಪಂದವು ಯುರೇನಿಯಂನ ಸಮೃದ್ಧೀಕರಣ ಮತ್ತು ಅಣ್ವಸ್ತ್ರಗಳ ಪೈಪೋಟಿಗೆ ದಾರಿ ಮಾಡಿಕೊಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಒಪ್ಪಂದವು ಅಮೆರಿಕದ ಕಂಪನಿಗಳಿಗೆ ಕೋಟ್ಯಂತರ ಡಾಲರ್‌ ಆದಾಯವನ್ನು ತಂದುಕೊಡಲಿದೆ. ಅಲ್ಲದೆ ಇರಾನ್‌ನ ಶತ್ರುರಾ‌ಷ್ಟ್ರ ಸೌದಿ ಅರೇಬಿಯಾಗೆ ದೊಡ್ಡ ಜಯ ಸಿಕ್ಕಂತಾಗುತ್ತದೆ. ಇಸ್ರೇಲ್‌ನೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸದೆಯೇ ಅತ್ಯಾಧುನಿಕ ಪರಮಾಣು ತಂತ್ರಜ್ಞಾನವನ್ನು ಪಡೆದುಕೊಳ್ಳಲು ಸೌದಿ ಅರೇಬಿಯಾಕ್ಕೆ ಈ ಒಪ್ಪಂದವು ದಾರಿ ಮಾಡಿಕೊಡುತ್ತದೆ.

ಯುದ್ಧ: ಬಜೆಟ್‌ಗೆ ಅನುಮೋದನೆ

ಇರಾನ್‌ ಯುದ್ಧ ಹಾಗೂ ಸರ್ಕಾರದ ಇತರ ಪ್ರಮುಖ ಕೆಲಸಗಳಿಗೆ ಅನುದಾನ ಒದಗಿಸಲು 95 ಶತಕೋಟಿ ಡಾಲರ್ (ಸುಮಾರು ₹9.18 ಲಕ್ಷ ಕೋಟಿ) ಮೊತ್ತದ ಬಜೆಟ್‌ ಪ್ರಸ್ತಾವವನ್ನು ಅಮೆರಿಕ ಸಂಸತ್‌ನ ಕೆಳಮನೆ (ಹೌಸ್‌ ಆಫ್‌ ರೆಪ್ರಸೆಂಟೇಟಿವ್) ಅಂಗೀಕರಿಸಿದೆ. ಸದನದ ಎಲ್ಲ ಡೆಮಾಕ್ರಟಿಕ್ ಸಂಸದರು ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದರು. 'ಈ ದೊಡ್ಡ ಮೊತ್ತವನ್ನು ದೇಶದ ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಬಳಸಬಹುದಿತ್ತು' ಎಂದು ಡೆಮಾಕ್ರಟಿಕ್ ಸಂಸದರು ಪ್ರತಿಪಾದಿಸಿದರು.

ಹಡಗುಗಳ ಮೇಲೆ ಹುಥಿ ದಾಳಿ

ಸೌದಿ ಬಂದರುಗಳ ಮೇಲೆ ದಿಗ್ಬಂಧನ ವಿಧಿಸುವುದಾಗಿ ಹುಥಿ ಬಂಡುಕೋರರು ಘೋಷಿಸಿದ್ದರು. ಇದರ ಬೆನ್ನಲ್ಲೇ ಸೌದಿ ಅರೇಬಿಯಾದ 'ಎನ್ಸೆಲಿಯಾ' ಮತ್ತು 'ಲೈಲಾ' ಎಂಬ ತೈಲ ಸಾಗಣೆ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿರುವುದಾಗಿ ಹುಥಿ ಬಂಡುಕೋರರು ತಿಳಿಸಿದ್ದಾರೆ.

'ಎನ್ಸೆಲಿಯಾ' ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಸೌದಿ ಅರೇಬಿಯಾ ದೃಢಪಡಿಸಿದೆ. ಆದರೆ ಇನ್ನೊಂದು ಹಡಗಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.‌ ಹುಥಿಗಳು ಎಷ್ಟರ ಮಟ್ಟಿಗೆ ದಿಗ್ಬಂಧನವನ್ನು ಜಾರಿಗೆ ತರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಬೆದರಿಕೆಯು ಹೊರ್ಮುಜ್‌ ಜಲಸಂಧಿಯನ್ನು ಮುಚ್ಚುವ ಆತಂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೆ ಮೂರು ತೈಲ ಸಾಗಣೆ ಹಡಗುಗಳನ್ನು ತಡೆದಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ (ಐಆರ್‌ಜಿಸಿ) ತಿಳಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries