ಉಪ್ಪಳ: ಸರ್ಕಾರಿ ಉದ್ಯೋಗದ ಕನಸು ಹೊತ್ತ ಯುವಜನರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಇವರ ಆಯೋಜನೆಯಲ್ಲಿ ಪಿ.ಎಸ್.ಸಿ ಉಚಿತ ಮಾಹಿತಿ ಶಿಬಿರ ಉದ್ಘಾಟನೆಗೊಂಡಿತು. ಅವೇಕ್ ಕಾಸರಗೋಡು ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ಉಚಿತ ತರಬೇತಿ ಶಿಬಿರಕ್ಕೆ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರವು ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದಲ್ಲಿ ಜರುಗುವುದು.
ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಇಂದಿನ ತಯಾರಿ ನಾಳಿನ ಸರ್ಕಾರಿ ಉದ್ಯೋಗಕ್ಕೆ ಭದ್ರ ಅಡಿಪಾಯ ಮತ್ತು ಈ ಶಿಬಿರವು ಪಿ. ಎಸ್.ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಜಿತ್ ಪಾಣೂರು ಕಣ್ಣೂರು ಭಾಗವಹಿಸಿದರು. ಅವೇಕ್ ಸಂಸ್ಥೆಯ ಪ್ರಮುಖರಾದ ನ್ಯಾಯವಾದಿ ಕೆ.ಶ್ರೀಕಾಂತ್, ಶ್ರೀಮಠದ ಟ್ರಸ್ಟಿ ವಿಶ್ವನಾಥನ್ ವೆಂಗರೆ ಹಾಗೂ ಮಂಗಲ್ಪಾಡಿ ಸೇವಾ ಭಾರತೀಯ ಅಧ್ಯಕ್ಷ ರಘು ಚೆರುಗೋಳಿ ಉಪಸ್ಥಿತರಿದ್ದರು. ಸರ್ವೇಶ್ ಕೊರಂಬಳ ನಿರೂಪಿಸಿದರು.




