HEALTH TIPS

ತಕೈಚಿ ಭೇಟಿ: ಭಾರತ-ಜಪಾನ್‌ ನಡುವಿನ ರಕ್ಷಣಾ ಸಹಕಾರ ಚೀನಾವನ್ನು ನಿಯಂತ್ರಿಸಬಹುದೆ?

 ಚೀನಾದ 'ಸ್ಟ್ರಿಂಗ್ ಆಫ್ ಪರ್ಲ್ಸ್' (ಮುತ್ತುಗಳ ಹಾರ) ಯೋಜನೆಗೆ ಭಾರತದ 'ಮಹಾಸಾಗರ' (ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಸಹಕಾರ ಮತ್ತು ಸಮಗ್ರ ಪ್ರಗತಿ) ಉಪಕ್ರಮವು ಚೀನಾಗೆ ಪ್ರತ್ಯುತ್ತರವೇ? ಜಪಾನ್ ಪ್ರಧಾನಿ ಸನೇ ತಕೈಚಿ ಅವರ ಭಾರತ ಭೇಟಿ ಸಂದರ್ಭದಲ್ಲಿ ಉಭಯ ದೇಶಗಳು ರಕ್ಷಣೆ, ಮೂಲಸೌಕರ್ಯ ಮತ್ತು ಕಡಲ ಸಹಕಾರವನ್ನು ವಿಸ್ತರಿಸಲು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. 


ಉಭಯ ದೇಶಗಳ ಈ ಸಹಕಾರ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವನ್ನು ಕಟ್ಟಿ ಹಾಕುವ ಉದ್ದೇಶವೇ ಎಂಬ ವಿಶ್ಲೇಷಣೆ...

ಇಂಡೊ-ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವನ್ನು ನಿಯಂತ್ರಿಸಲು 'ಮಹಾಸಾಗರ' ಉಪಕ್ರಮ ರೂಪುಗೊಂಡಿದೆಯೇ? ಬೀಜಿಂಗ್‌ನ 'ಸ್ಟ್ರಿಂಗ್ ಆಫ್ ಪರ್ಲ್ಸ್' ತಂತ್ರವನ್ನು ಎದುರಿಸಲು ಇದು ಭಾರತದ ಪ್ರತಿತಂತ್ರವೇ? ಭಾರತದ ಪ್ರತಿಷ್ಠಿತ ದಿನಪತ್ರಿಕೆಯೊಂದರಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಲೇಖನವೊಂದನ್ನು ಬರೆದ ನಂತರ ಈ ಪ್ರಶ್ನೆಗಳು ಮುಂಚೂಣಿಗೆ ಬಂದಿವೆ. ಅದರಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿರುವ ಈ ಉಪಕ್ರಮ, ಸಾಗರದ ಮೇಲೆ ಕೇವಲ ಆಧಿಪತ್ಯ ಸಾಧಿಸದೇ ಇಡೀ ಪ್ರಾಂತ್ಯದ ಸ್ಥಿರತೆ, ಬೆಳವಣಿಗೆ ಹಾಗೂ ಸಂಪನ್ಮೂಲಗಳ ಬಳಕೆಯ ತಾಣವಾಗಿ ನೋಡಬೇಕು ಎಂದು ಬರೆದಿದ್ದಾರೆ.

ಮುಂದುವರಿದು, ಭಾರತ ತನ್ನ ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಿಕೊಂಡು ಈ ಭಾಗದಲ್ಲಿನ ದೇಶಗಳನ್ನು ಬೆಂಬಲಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದಿದ್ದಾರೆ

ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಸನೇ ತಕೈಚಿ

ಮಹಾಸಾಗರ (MAHASAGAR) ಎಂದರೇನು?

'ಮಹಾಸಾಗರ' ಎಂಬುದು ಭಾರತದ ಸಾಗರ ಸಿದ್ಧಾಂತವಾಗಿದೆ (maritime doctrine). ಪ್ರಧಾನಿ ನರೇಂದ್ರ ಮೋದಿ ಅವರು 2025ರ ಮಾರ್ಚ್‌ನಲ್ಲಿ ಮಾರಿಷಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಾಸಾಗರ ಉಪಕ್ರಮವನ್ನು ಪ್ರಕಟಿಸಿದ್ದರು. 2014ಕ್ಕೂ ಮುನ್ನ ಈ ಯೋಜನೆಯನ್ನು 'ಸಾಗರ' ಎಂದು ಕರೆಯಲಾಗುತ್ತಿತ್ತು. ಭಾರತವು ಹಿಂದೂ ಮಹಾಸಾಗರದ ಮೇಲಿನ ತನ್ನ ಗಮನವನ್ನು ಕೇವಲ ಪ್ರಾದೇಶಿಕ ದೃಷ್ಟಿಕೋನದಿಂದ ನೋಡದೆ ಜಾಗತಿಕವಾಗಿ ಗಮನ ಸೆಳೆಯಬೇಕಿದೆ. ಹಿಂದೂ ಮಹಾಸಾಗರದ ತೀರದಲ್ಲಿರುವ 'ಗ್ಲೋಬಲ್ ಸೌತ್' (ಜಾಗತಿಕ ದಕ್ಷಿಣ) ದೇಶಗಳಿಗೆ ಸಹಾಯ ಮಾಡುವುದಕ್ಕೆ ಒತ್ತು ನೀಡುವುದು, ಭೌಗೋಳಿಕ, ರಾಜಕೀಯ ದೃಷ್ಟಿಕೋನಗಳ ಹೊರತಾಗಿ, ವ್ಯಾಪಾರ, ಆರ್ಥಿಕತೆ ಮತ್ತು ಸುಸ್ಥಿರತೆ ಮೇಲೆ ಗಮನ ಹರಿಸುವುದು ಮಹಾಸಾಗರ ಉಪಕ್ರಮದ ಮುಖ್ಯ ಉದ್ದೇಶ.

ಆದಾಗ್ಯೂ, ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾ ದೇಶವನ್ನು ನಿಯಂತ್ರಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದೊಂದಿಗೆ ಗಡಿ ವಿವಾದ ಹೊಂದಿರುವ ಸಣ್ಣ ದೇಶಗಳಿಗೆ ನೆರವು ನೀಡುವ ಮೂಲಕ, ವಿವಾದವನ್ನು ತಮಗೆ ಪೂರಕವಾಗಿ ಬಗೆಹರಿಸಿಕೊಳ್ಳಲು, ಚೀನಾ ವಿರುದ್ಧ ಧ್ವನಿ ಎತ್ತಲು ನೆರವಾಗಬಹುದು ಎಂದು ಭಾರತ ಅಂದಾಜಿಸಿದೆ. ಇದಕ್ಕೆ ಜಪಾನ್‌ ಕೂಡ ಬೆಂಬಲ ಸೂಚಿಸಿರುವುದು ಭಾರತಕ್ಕೆ ಬಲ ಸಿಕ್ಕಂತಾಗಿದೆ.

ಮಹಾಸಾಗರ ಉಪಕ್ರಮ ಮುಖ್ಯವಾಗಿ ನೀಲಿ (ಸಾಗರ) ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಮೂಲಭೂತವಾಗಿ ಆರ್ಥಿಕ ಬೆಳವಣಿಗೆ ಉತ್ತೇಜಿಸಲು, ಉದ್ಯೋಗ ಸೃಷ್ಟಿಸಲು ಮತ್ತು ಜೀವನೋಪಾಯ ಸುಧಾರಿಸಲು ಸಾಗರ, ಸಮುದ್ರ ಮತ್ತು ಕರಾವಳಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸುಸ್ಥಿರ ಆರ್ಥಿಕ ಮಾದರಿಯಾಗಿದೆ.

ಜಪಾನ್ ಪ್ರಧಾನಿ ಸನೇ ತಕೈಚಿ

ಇಂಡೊ-ಪೆಸಿಫಿಕ್ ತಂತ್ರಗಾರಿಕೆ...

ಭಾರತ ಮತ್ತು ಜಪಾನ್ ದೇಶಗಳು 'ಕ್ವಾಡ್' ಒಕ್ಕೂಟದ ಸದಸ್ಯರಾಗಿದ್ದು ಈ ಉಭಯ ರಾಷ್ಟ್ರಗಳು ಮಾನವೀಯ ನೆರವು ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಸೀಮಿತವಾಗಿವೆ. ಇದೀಗ ಮಹಾಸಾಗರ ಯೋಜನೆ ಮೂಲಕ ಇಂಡೊ-ಪೆಸಿಫಿಕ್ ತಂತ್ರಗಾರಿಕೆ ಕಡೆಗೆ ಮುಖ ಮಾಡಿವೆ ಎಂದು ರಾಜಕೀಯ ತಜ್ಞ ಮೇಜರ್ (ನಿವೃತ್ತ) ಅಮಿತ್ ಬನ್ಸಾಲ್ ಹೇಳಿದ್ದಾರೆ. ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಭದ್ರತೆಯ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುತ್ತಿದ್ದರೆ, ಜಪಾನ್‌ ದೂರದ ಪೆಸಿಫಿಕ್ ವಲಯದ ಮೇಲೆ ದೃಷ್ಟಿ ನೆಟ್ಟಿದೆ ಎಂದು ಅವರು ಹೇಳಿದರು.

ಭಾರತವು ಜಪಾನ್‌ ಸಹಾಯದಿಂದ ಚೀನಾ ಎದುರಿಸಲು ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾ ಪ್ರಾಬಲ್ಯಕ್ಕೆ ಸವಾಲೊಡ್ಡಲು ಪ್ರಯತ್ನಿಸಬಹುದಾಗಿದೆ. ಇಂಡೊ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ, ಚೀನಾವನ್ನು ಹೊರತುಪಡಿಸಿದರೆ ಭಾರತ ಮತ್ತು ಜಪಾನ್ ಈ ಪ್ರದೇಶವನ್ನು ನಿಯಂತ್ರಿಸುವ ಎರಡು ಪ್ರಮುಖ ಶಕ್ತಿಗಳಾಗಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವ ಮತ್ತು ಅದರ ಹೊಸ ಹೊಸ ಯೋಜನೆಗಳನ್ನು ಗಮನಿಸಿದರೆ, ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಅಮಿತ್ ಬನ್ಸಾಲ್ ಹೇಳಿದ್ದಾರೆ.

ಚೀನಾದ 'ಸ್ಟ್ರಿಂಗ್ ಆಫ್ ಪರ್ಲ್ಸ್' ತಂತ್ರಗಾರಿಕೆ

ಭಾರತದ ನೆಕ್ಲೇಸ್ ಆಫ್ ಡೈಮಂಡ್ಸ್ (ವಜ್ರದ ಹಾರ) ತಂತ್ರಗಾರಿಕೆ ಅಡಿಯಲ್ಲಿ ಹಿಂದೂ ಮಹಾಸಾಗರದಲ್ಲಿ ನೌಕಾ ನೆಲೆಗಳ ಜಾಲ, ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸಲು ಜಪಾನ್ ದೇಶ ಭಾರತಕ್ಕೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲ ನೀಡಬಹುದು. ಈ ತಂತ್ರವು ಚೀನಾದ "ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತುಗಳ ಹಾರ)ಗೆ ಪ್ರತಿತಂತ್ರವಾಗಿದೆ.

ಭಾರತ ಮತ್ತು ಜಪಾನ್ ನಡುವಿನ ಸಹಕಾರದ ಪ್ರಮುಖ ಆಯಾಮವೆಂದರೆ ಪ್ರಸ್ತಾವಿತ ಕೈಗಾರಿಕ ವಲಯಕ್ಕೆ ನೆರವು ನೀಡುವುದು. ಇದು ಈಶಾನ್ಯ ಭಾರತವನ್ನು ಬಂಗಾಳ ಕೊಲ್ಲಿಯೊಂದಿಗೆ ಸಂಪರ್ಕಿಸಲು ನೆರವು ನೀಡುತ್ತದೆ. ಹಾಗೂ ಬಂಗಾಳ ಕೊಲ್ಲಿಯಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಈ ಯೋಜನೆ ಅತ್ಯಂತ ಪ್ರಮುಖವಾಗಿದೆ. ಹಾಗಾಗಿ ಜಪಾನ್‌ನ 'ಜೈಕಾ' ಕಂಪನಿ ಈಶಾನ್ಯ ಭಾರತದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡುತ್ತಿದೆ.

ಭಾರತ-ಜಪಾನ್ ರಕ್ಷಣಾ ಸಹಕಾರ

ಭಾರತ-ಜಪಾನ್ ನಡುವಿನ ಸಹಕಾರವು ಆರ್ಥಿಕ, ಭೌಗೋಳಿಕ ಮತ್ತು ರಾಜಕೀಯವಾಗಿ ಉಭಯ ದೇಶಗಳಿಗೆ ಇಂಡೊ-ಫೆಸಿಪಿಪ್‌ ವಲಯದಲ್ಲಿ ಹಾಗೂ ಚೀನಾವನ್ನು ಎದುರಿಸಲು ಸಾಕಷ್ಟು ಪ್ರಯೋಜನವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ದಿಕ್ಕುಗಳಿಂದ ಚೀನಾವನ್ನು ಸುತ್ತುವರಿಯುವುದು ಮತ್ತು ಅದರದ್ದೇ ನೆಲೆಯಾದ ದಕ್ಷಿಣ ಚೀನಾ ಸಮುದ್ರದಲ್ಲಿ ಅದನ್ನು ಕಟ್ಟಿಹಾಕುವುದು ಭಾರತ-ಜಪಾನ್‌ ದೇಶಗಳ ಮುಖ್ಯ ಉದ್ದೇಶವಾಗಿದೆ.

ಚೀನಾವನ್ನು ನಿಯಂತ್ರಿಸುವ ಏಕೈಕ ಉದ್ದೇಶದಿಂದ ಭಾರತವು ಈಗಾಗಲೇ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ (ಕ್ವಾಡ್) ಕೈಜೋಡಿಸಿದೆ. ತಕೈಚಿ ಅವರ ಭಾರತ ಭೇಟಿಯು ಚೀನಾವನ್ನು ನಿಯಂತ್ರಿಸುವುದಕ್ಕೆ ಪೂರಕವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries