ಖಾಂಡ್ವಾ (PTI): ರಕ್ತದಾನ ಮಾಡುವ ಮೂಲಕ ದೇವರ ದರ್ಶನಕ್ಕೆ ಉಚಿತ ವಿಐಪಿ ಪಾಸ್ ಪಡೆಯುವ ವ್ಯವಸ್ಥೆಯನ್ನು ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಪ್ರಸಿದ್ಧ ಓಂಕಾರೇಶ್ವರ ಶಿವ ದೇವಾಲಯದಲ್ಲಿ (ಜ್ಯೋತಿರ್ಲಿಂಗ) ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ಜಿಲ್ಲಾಡಳಿತವು ಪ್ರತಿ ವಾರ 150ರಿಂದ 200 ಯೂನಿಟ್ ರಕ್ತ ಸಂಗ್ರಹಿಸುತ್ತಿದೆ. ಅಲ್ಲದೆ ಭಕ್ತರು ದೀರ್ಘ ಕಾಲ ಸರತಿಯಲ್ಲಿ ನಿಲ್ಲುವ ಬದಲಿಗೆ, ತಮ್ಮ ಕುಟುಂಬದ ಜತೆ ತ್ವರಿತವಾಗಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
'ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಬೇಡಿಕೆ ಹೆಚ್ಚಿರುವುದನ್ನು ಗಮನಿಸಿ, ದೇಗುಲದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಈ ಮೂಲಕ ಭಕ್ತರನ್ನು ರಕ್ತದಾನಕ್ಕೆ ಪ್ರೋತ್ಸಾಹಿಸಿದ್ದೇವೆ' ಎಂದು ಜಿಲ್ಲಾಧಿಕಾರಿ ರಿಷವ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯವಾಗಿ ವಿಐಪಿ ದರ್ಶನದ ಪಾಸ್ ಬೆಲೆ ಒಬ್ಬರಿಗೆ ₹300 ಇದೆ. ರಕ್ತದಾನ ಮಾಡುವ ಭಕ್ತರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವಿಐಪಿ ಪಾಸ್, ಪ್ರಮಾಣಪತ್ರ, ಪ್ರಸಾದ ಮತ್ತು ಉಡುಗೊರೆಯಾಗಿ ಓಂಕಾರೇಶ್ವರ ದೇವರ ಚಿತ್ರ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

