ನವದೆಹಲಿ: ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಅಸ್ಸಾಂನಲ್ಲಿ 27 ಮಂದಿಯನ್ನು ವಿದೇಶಿಯರೆಂದು ಘೋಷಿಸಿದ್ದ ಗುವಾಹಾಟಿ ಹೈಕೋರ್ಟ್‌ನ ತೀರ್ಪುಗಳನ್ನು ರದ್ದುಗೊಳಿಸಿರುವ ನ್ಯಾಯಾಲಯ, ಪ್ರಕರಣಗಳನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಸಂಬಂಧಿತ ವಿದೇಶಿಯರ ನ್ಯಾಯಮಂಡಳಿಗಳಿಗೆ ಹಿಂತಿರುಗಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು 27 ಮೇಲ್ಮನವಿಗಳನ್ನು ಅನುಮತಿಸಿ, ಪೌರತ್ವದ ಪ್ರಶ್ನೆಯು ಆಳವಾದ ಸಾಂವಿಧಾನಿಕ ಮಹತ್ವ ಹೊಂದಿರುವುದರಿಂದ ಅದರ ನಿರ್ಧಾರವು ನ್ಯಾಯಯುತತೆಯ ತತ್ವಗಳಿಗೆ ಅನುಗುಣವಾಗಿರಬೇಕು ಎಂದು ಹೇಳಿದೆ.
"ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವು ಅತ್ಯುನ್ನತ ಸಾಂವಿಧಾನಿಕ ಹಾಗೂ ಕಾನೂನು ಮಹತ್ವದ ಕ್ಷೇತ್ರವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

