ಶ್ರೀನಗರ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಮುಫ್ತಿ ಬಹಿರಂಗವಾಗಿ ಟೀಕಿಸಿದ್ದರು.
ಖಮೇನಿ ಹತ್ಯೆಯ ನಂತರ ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪವನ್ನೂ ಸೂಚಿಸಿದ್ದರು.
ಮುಫ್ತಿ ಅವರು ಈ ಆಹ್ವಾನವನ್ನು ಸ್ವೀಕರಿಸಿದ ಜಮ್ಮು ಮತ್ತು ಕಾಶ್ಮೀರದ ಏಕೈಕ ಪ್ರಮುಖ ಶಿಯಾಯೇತರ ರಾಜಕೀಯ ನಾಯಕಿಯಾಗಿದ್ದಾರೆ.
ಇರಾನ್ಗೆ ವಾಣಿಜ್ಯ ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ, ಮೆಹಬೂಬಾ ಮುಫ್ತಿ ಅವರು ಗುರುವಾರ ಶ್ರೀನಗರದಿಂದ ನವದೆಹಲಿಗೆ ತೆರಳಿದ್ದಾರೆ. ಅಲ್ಲಿಂದ ವಿದೇಶಿ ಗಣ್ಯರಿಗಾಗಿ ಇರಾನ್ ಸರ್ಕಾರವು ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದ ಮೂಲಕ ಟೆಹರಾನ್ಗೆ ಪ್ರಯಾಣಿಸಲಿದ್ದಾರೆ ಎಂದು ಪಿಡಿಪಿ ನಾಯಕರು ತಿಳಿಸಿದ್ದಾರೆ.
ಮುಫ್ತಿ ಅವರಲ್ಲದೆ, ಜಮ್ಮು ಮತ್ತು ಕಾಶ್ಮೀರದ ಹಲವು ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಇದರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹ್ದಿ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಇಮ್ರಾನ್ ರಜಾ ಅನ್ಸಾರಿ ಮತ್ತು ಧರ್ಮಗುರುಗಳಾದ ಅಗಾ ಸೈಯದ್ ಮೊಹಮ್ಮದ್ ಹಾದಿ, ಮಸ್ರೂರ್ ಅಬ್ಬಾಸ್ ಅನ್ಸಾರಿ ಮತ್ತು ಅಗಾ ಸೈಯದ್ ಹಸನ್ ಮೊಸಾವಿ ಅಲ್ ಸಫಾವಿ ಸೇರಿದ್ದಾರೆ. ಇವರೆಲ್ಲರೂ ಶಿಯಾ ಮುಸ್ಲಿಮರಾಗಿದ್ದಾರೆ.
ಇನ್ನು, ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಲ್ಮಾನ್ ಖುರ್ಷಿದ್ ಮತ್ತು ಪವನ್ ಖೇರಾ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಇರಾನ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುವ ಇರಾದೆಯನ್ನು ಭಾರತ ಹೊಂದಿದೆ. ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪವಿತ್ರಾ ಮಾರ್ಗರಿಟಾ ಮತ್ತು ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಪ್ರತಿನಿಧಿಸುವ ನಿರೀಕ್ಷೆಯಿದೆ. ಜುಲೈ 9ರಂದು ಖಮೇನಿ ಅಂತ್ಯಕ್ರಿಯೆ ನಡೆಯಲಿದೆ.

